ತ್ರಿಶೂರ್ (ಕೇರಳ): ಕೇರಳದಲ್ಲಿ 22 ವರ್ಷದ ಯುವಕನೊಬ್ಬ ಶಂಕಿತ ಮಂಕಿ ಪಾಕ್ಸ್ ಸೋಂಕಿನಿಂದ ಮೃತಪಟ್ಟಿದ್ದು, ಇದು ಭಾರತದಲ್ಲಿ ವೈರಸ್‌ನಿಂದಾಗಿ ದಾಖಲಾದ ಮೊದಲ ಸಾವು ಇದಾಗಿದೆ.
ತ್ರಿಶೂರಿನ ಪುನ್ನಿಯೂರು ಮೂಲದ ಯುವಕ ಶನಿವಾರ ತ್ರಿಶೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜುಲೈ 21 ರಂದು ಯುಎಇಯಿಂದ ಹಿಂತಿರುಗಿದ್ದರು. ನಂತರ ಮಂಕಿ ಪಾಕ್ಸ್ ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಜುಲೈ 21ರಂದು ಮನೆಗೆ ತಲುಪಿದ್ದ ಯುವಕನ ಮರು ದಿನವೇ ಅಂದರೆ ಜುಲೈ 22ರಂದು ತನ್ನ ಸ್ನೇಹಿತರೊಂದಿಗೆ ಫುಟ್ಬಾಲ್ ಆಟವಾಡಿದ್ದ ಎನ್ನಲಾಗ್ತಿದೆ. ಬಳಿಕ ಜುಲೈ 26ರಂದು ಜ್ವರ ಕಾಣಿಸಿಕೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ನಂತರ ಮತ್ತೊಂದು ಆಸ್ಪತ್ರೆಗೆ ದಾಖಲಾದಾಗ ಮಂಕಿಪಾಕ್ಸ್ ಶಂಕೆ ವ್ಯಕ್ತವಾಗಿತ್ತು. ಆಗ ಅಲಪ್ಪುಳದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡು ಬಂದಿತ್ತು.
ಅಲ್ಲಿಂದ ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಲ್ಯಾಬ್‌ಗೆ ಸ್ವ್ಯಾಬ್ ಮಾದರಿ ಕಳುಹಿಸಲಾಗಿತ್ತು. ಇದರಲ್ಲೂ ಕೂಡ ಮಂಕಿಪಾಕ್ಸ್ ಪಾಸಿಟಿವ್ ಖಚಿತವಾಗಿತ್ತು. ದೇಶದಲ್ಲಿ ಈವರೆಗೆ ಒಟ್ಟು ನಾಲ್ಕು ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಮೂರು ಕೇಸ್ಗಳು ಕೇರಳದಲ್ಲೇ ಕಂಡುಬಂದಿವೆ. ಈಗ ಭಾರತದಲ್ಲಿ ಈ ಸೋಂಕಿಗೆ ಸಂಬಂಧಿಸಿದಂತೆ ಮೊದಲ ಸಾವು ಸಹ ಕೇರಳದಲ್ಲೇ ಸಂಭವಿಸಿದೆ.