ನವದೆಹಲಿ: ಪಾಕಿಸ್ತಾನಕ್ಕೆ ತೆರಳಿ ತನ್ನ ಫೇಸ್‌ಬುಕ್ ಗೆಳೆಯನ ವರಿಸಿದ್ದ ಭಾರತದ ಮಹಿಳೆ ಅಂಜು ನಾಲ್ಕೇ ತಿಂಗಳಲ್ಲಿ ಮತ್ತೆ ತಾಯ್ನಾಡಿಗೆ ವಾಪಸ್ ಆಗಿದ್ದಾಳೆ. ವಾಘಾ ಗಡಿಯ ಮೂಲಕ ಆಕೆ ಭಾರತಕ್ಕೆ ಬಂದಿದ್ದಾಳೆ. ಇದಕ್ಕೂ ಮೊದಲು ಅಂಜು (ಫಾತಿಮಾ) ಅವರನ್ನು ಭದ್ರತಾ ಏಜೆನ್ಸಿಗಳು ವಿಚಾರಣೆ ನಡೆಸಿದ್ದರು. 'ನಾನು ಸಂತೋಷವಾಗಿದ್ದೇನೆ. ಹೆಚ್ಚೇನೂ ಮಾತನಾಡುವುದಿಲ್ಲ' ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾ ಎಂಬಾತನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಈ ವರ್ಷದ ಜುಲೈನಲ್ಲಿ 34 ವರ್ಷದ ಮಹಿಳೆ ಅಂಜು ಹೋಗಿದ್ದರು. ಈಗ ಫಾತಿಮಾ ಎಂದು ಕರೆಯಲ್ಪಡುವ ಆಕೆ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದಲ್ಲಿ ವಾಸಿಸುತ್ತಿದ್ದರು. ನಸ್ರುಲ್ಲಾನನ್ನು ಮದುವೆಯಾದ ನಂತರ ಮಹಿಳೆ ಇಸ್ಲಾಂಗೆ ಮತಾಂತರಗೊಂಡಿದ್ದಾಗಿ ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದವು.
ಆರಂಭದಲ್ಲಿ ಅಂಜು ಮತ್ತು ನಸ್ರುಲ್ಲಾ ಅವರು ವಿವಾಹವಾಗುವ ಯೋಜನೆ ಇರಲಿಲ್ಲ. ಅಂಜುವಿನ ವೀಸಾ ಅವಧಿ ಆಗಸ್ಟ್ 20 ಕ್ಕೆ ಕೊನೆಯಾಗಲಿದ್ದು, ಬಳಿಕ ಆಕೆ ಭಾರತಕ್ಕೆ ಮರಳುತ್ತಾರೆ ಎಂದು ಹೇಳಲಾಗಿತ್ತು. ಈ ಹೇಳಿಕೆ ಹೊರಬಿದ್ದ ಒಂದು ದಿನದ ನಂತರ ಇಬ್ಬರೂ ವಿವಾಹವಾಗಿದ್ದರು. ಇದರ ಫೋಟೋ ಕೂಡ ಬಿಡುಗಡೆ ಮಾಡಲಾಗಿತ್ತು. ಆಗಸ್ಟ್‌ನಲ್ಲಿ ಪಾಕಿಸ್ತಾನ ಸರ್ಕಾರ ಅಂಜು ಅವರ ವೀಸಾವನ್ನು ಒಂದು ವರ್ಷ ವಿಸ್ತರಿಸಿತು. ಆಕೆಯು ಇಸ್ಲಾಂಗೆ ಮತಾಂತರಗೊಂಡು ನಸ್ರುಲ್ಲಾನನ್ನು ವರಿಸಿದ ನಂತರ ಫಾತಿಮಾ ಎಂದು ಹೆಸರು ಬದಲಿಸಿಕೊಂಡಿದ್ದಳು.
ಇದಾದ ಒಂದು ತಿಂಗಳು ಅಂದರೆ ಸೆಪ್ಟೆಂಬರ್‌ನಲ್ಲಿ, ಅಂಜು ಎರಡನೇ ಪತಿ ನಸ್ರುಲ್ಲಾ, ತನ್ನ ಪತ್ನಿ ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾಳೆ. ಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾಳೆ ಎಂದು ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ರಾಜಸ್ಥಾನ ಮೂಲಕ ಪಾಕ್ಗೆ ಹೋಗಿದ್ದ ಅಂಜು: ರಾಜಸ್ಥಾನದ ಭಿವಾಂಡಿ ಜಿಲ್ಲೆಯ ವಿವಾಹಿತ ಮಹಿಳೆ ಅಂಜು, ಫೇಸ್‌ಬುಕ್‌ನಲ್ಲಿ ಪಾಕ್ನ ನಸ್ರುಲ್ಲಾ ಜೊತೆಗೆ ಸ್ನೇಹ ಬೆಳೆಸಿಕೊಂಡಿದ್ದಳು. ಬಳಿಕ ಇಬ್ಬರೂ ಪ್ರೀತಿಸುತ್ತಿದ್ದರು. ಆ ವ್ಯಕ್ತಿಯನ್ನು ಭೇಟಿಯಾಗಲು ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯಕ್ಕೆ ಜುಲೈನಲ್ಲಿ ಪ್ರಯಾಣ ಬೆಳೆಸಿದ್ದರು. ಕೆಲವು ದಿನ ಜೈಪುರಕ್ಕೆ ಹೋಗುವುದಾಗಿ ಭಾರತದ ಮೊದಲ ಪತಿ ಅರವಿಂದ್ಗೆ ತಿಳಿಸಿದ್ದಳು. ಬಳಿಕ ಆಕೆ ಗಡಿ ದಾಟಿ ಪಾಕ್ಗೆ ಹೋಗಿದ್ದು, ಮಾಧ್ಯಮಗಳ ಮೂಲಕ ಅರವಿಂದ್ ತಿಳಿದುಕೊಂಡಿದ್ದ.
ಲಾಹೋರ್ಗೆ ತೆರಳಿದ ಬಳಿಕವೂ ಅಂಜು, ಅರವಿಂದ್ ಜೊತೆಗೆ ಸಂಪರ್ಕದಲ್ಲಿದ್ದಳು. ತಾನೀಗ ಲಾಹೋರ್ನಲ್ಲಿ ಇದ್ದೇನೆ. ಎರಡು ಮೂರು ದಿನಗಳಲ್ಲಿ ಹಿಂತಿರುಗುವುದಾಗಿ ಹೇಳಿದ್ದಳು. ಇದನ್ನೆಲ್ಲಾ ಆಕೆ ವಾಟ್ಸ್ಆ್ಯಪ್ ಮೂಲಕ ತಿಳಿಸಿದ್ದಳು ಎಂದು ಅರವಿಂದ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಕೆಲ ದಿನಗಳ ಬಳಿಕ ಅಂಜು ಮತ್ತು ನಸ್ರುಲ್ಲಾ ವಿವಾಹವಾದ ವದಂತಿ ಬಗ್ಗೆ ಪ್ರತಿಕ್ರಿಯಿಸಿ, ಇಬ್ಬರ ಬಗ್ಗೆ ನನಗೆ ಮೊದಲೇ ಮಾಹಿತಿ ಇತ್ತು. ಆದರೆ, ವಿವಾಹವಾಗುವುದು ಗೊತ್ತಿರಲಿಲ್ಲ. ತನ್ನ ಪತ್ನಿ ಮುಂದೊಂದು ದಿನ ವಾಪಸ್ ಮರಳಿ ಬರಲಿದ್ದಾಳೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ವಿಶೇಷ ಅಂದ್ರೆ ಅಂಜುಗೆ ಇಬ್ಬರು ಮಕ್ಕಳಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ಅರವಿಂದ್ ಜೊತೆ ಮೊದಲ ವಿವಾಹವಾಗಿದ್ದರು.