ಮುಂಬೈ (ಮಹಾರಾಷ್ಟ್ರ): ಶುಕ್ರವಾರದಂದು ಸ್ಥಳೀಯ ಷೇರು ಮಾರುಕಟ್ಟೆಗಳು ಆರಂಭಿಕ ವಹಿವಾಟಿನಲ್ಲಿ ನಷ್ಟದೊಂದಿಗೆ ಆರಂಭವಾದವು. ಕೋವಿಡ್ ಉಲ್ಬಣಿಸುವ ಭಯ ಹೆಚ್ಚಾಗಿರುವುದರಿಂದ ಜಾಗತಿಕ ಮಾರುಕಟ್ಟೆಗಳು ದುರ್ಬಲವಾಗಬಹುದು ಎಂಬ ಸೂಚನೆಗಳು ಬರುತ್ತಿವೆ. ಆರೋಗ್ಯ ವಲಯದ ಷೇರುಗಳಾದ ಗ್ರ್ಯಾನ್ಯೂಲ್ಸ್, ಮೊರೆಪೆನ್ ಲ್ಯಾಬ್, ಥೈರೋಕೇರ್ ಮತ್ತು ಸಿಪ್ಲಾ ಷೇರುಗಳು ಬೆಳಗ್ಗೆ ಏರಿಕೆ ಕಂಡರೆ, ಬಿಎಸ್‌ಇ ಐಟಿಯ ಹೆಚ್ಚಿನ ಷೇರುಗಳು ಆರಂಭಿಕ ಅವಧಿಯಲ್ಲಿ ಕುಸಿತ ಕಂಡವು.
ಶುಕ್ರವಾರ ಬೆಳಗ್ಗೆ 9.30ಕ್ಕೆ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 376 ಪಾಯಿಂಟ್ ಕುಸಿದು 60,450ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 115 ಪಾಯಿಂಟ್ ಇಳಿಕೆಯಾಗಿ 17,995.45ಕ್ಕೆ ತಲುಪಿದೆ. ಏಷ್ಯನ್ ಮಾರುಕಟ್ಟೆಗಳಲ್ಲಿ ಜಪಾನ್‌ನ ನಿಕ್ಕಿ ಬೆಳಗಿನ ವಹಿವಾಟಿನಲ್ಲಿ 297 ಪಾಯಿಂಟ್ ಕುಸಿದಿದ್ದರೆ, ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ 35.5 ಪಾಯಿಂಟ್ ಇಳಿಕೆ ಕಂಡಿದೆ. ಚೀನಾದ ಶಾಂಘೈ ಎರಡು ಅಂಕ ಗಳಿಸಿತು.
ಯುರೋಪ್‌ನಲ್ಲಿ, ಎಫ್‌ಟಿಎಸ್‌ಇ 28 ಪಾಯಿಂಟ್ ಕುಸಿತ ಕಂಡಿದೆ. ಸಿಎಸಿ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ. ಡಾಯ್ಚ ಬೋರ್ಸ್ 183 ಪಾಯಿಂಟ್‌ಗಳ ಇಳಿಕೆ ಕಂಡರೆ, ರಿಫಿನಿಟಿವ್ 2 ಪಾಯಿಂಟ್‌ಗಳ ಕುಸಿತ ಕಂಡಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಡೌ ಜೋನ್ಸ್ 348 ಪಾಯಿಂಟ್, ನಾಸ್‌ಡಾಕ್ 233 ಪಾಯಿಂಟ್ ಹಾಗೂ ಎಸ್ & ಪಿ 56 ಪಾಯಿಂಟ್‌ಗಳನ್ನು ಕಳೆದುಕೊಂಡಿವೆ.
ಗುರುವಾರದಂದು ಸೆನ್ಸೆಕ್ಸ್ 241.02 ಪಾಯಿಂಟ್ ಅಥವಾ 0.39 ಶೇಕಡಾ ಇಳಿಕೆಯಾಗಿ 60,826.22 ಕ್ಕೆ ಕೊನೆಗೊಂಡರೆ, ನಿಫ್ಟಿ 50 ಸೂಚ್ಯಂಕ 71.75 ಪಾಯಿಂಟ್ ಅಥವಾ 0.39 ರಷ್ಟು ಕಳೆದುಕೊಂಡು 18,127.35 ಕ್ಕೆ ತಲುಪಿತ್ತು. ಎರಡೂ ಸೂಚ್ಯಂಕಗಳು ಮೂರು ವಹಿವಾಟು ಅವಧಿಗಳಲ್ಲಿ 1.59 ರಷ್ಟು ಕುಸಿದವು.
ಇದನ್ನೂ ಓದಿ: ಶೇರ್ ಟ್ರೇಡಿಂಗ್ ಮಾಡುವಿರಾ.. ಮೊದಲು ಈ ವಿಷಯಗಳನ್ನು ತಿಳಿದು ಹೂಡಿಕೆ ಮಾಡಿ..