ನವದೆಹಲಿ: ಸದಾ ಒಂದಿಲ್ಲೊಂದು ಹೊಸತನದೊಂದಿಗೆ ಗ್ರಾಹಕರಿಗೆ ಹತ್ತಿರವಾಗುತ್ತಿರುವ ಭಾರತೀಯ ರೈಲ್ವೆ ಇಲಾಖೆ ಇದೀಗ ಮತ್ತೊಂದಿಷ್ಟು ಗುಡ್ನ್ಯೂಸ್ ಹೊತ್ತು ತಂದಿದೆ. IRCTC ವೆಬ್ಸೈಟ್ ಮತ್ತು ಅಪ್ಲಿಕೇಶನ್ನಲ್ಲಿ ಟಿಕೆಟ್ ಬುಕ್ ಮಾಡುವ ಸಾಮರ್ಥ್ಯ ಹೆಚ್ಚಿಸಲಾಗಿದೆ. ಪ್ರಯಾಣಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಈ ನಿರ್ಧಾರ ಕೈಗೊಂಡಿದೆ.
ರೈಲ್ವೆ ಸಚಿವಾಲಯ ಹೊರಡಿಸಿರುವ ಪ್ರಕಟಣೆ ಪ್ರಕಾರ, ಆಧಾರ್ ಕಾರ್ಡ್ ಲಿಂಕ್ ಮಾಡದ ಬಳಕೆದಾರರ ಐಡಿಯಿಂದ ತಿಂಗಳಿಗೆ ಇಷ್ಟು ದಿನ ಆರು ಟಿಕೆಟ್ ಬುಕ್ ಮಾಡುವ ಮಿತಿ ನೀಡಲಾಗಿತ್ತು. ಆದರೆ, ಇದೀಗ ಅದರ ಮಿತಿಯನ್ನು 12ಕ್ಕೆ ಏರಿಕೆ ಮಾಡಲಾಗಿದೆ. ಉಳಿದಂತೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಿರುವ ಬಳಕೆದಾರರ ಐಡಿಯಿಂದ ತಿಂಗಳಿಗೆ 12ರ ಬದಲಾಗಿ 24 ಟಿಕೆಟ್ ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ , ಪ್ರಯಾಣಿಕರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.
ಇದರ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಐಆರ್ಸಿಟಿಸಿ ವೆಬ್ಸೈಟ್ ಮತ್ತು ಅಪ್ಲಿಕೇಶನ್ನಲ್ಲಿ ಟಿಕೆಟ್ ಬುಕ್ ಮಾಡುವಾಗ ನಾವು ಹೋಗುವ ಸ್ಥಳದ ವಿಳಾಸ ಹಾಗೂ ನಾವು ವಾಸ ಮಾಡುವ ವಿಳಾಸ ನಮೂದಿಸುವುದು ಕಡ್ಡಾಯವಾಗಿತ್ತು. ಆದರೆ, ಇದೀಗ ಕೋವಿಡ್ ಪ್ರಕರಣ ಕಡಿಮೆಯಾಗಿರುವ ಕಾರಣ, ಪ್ರಯಾಣಿಕರು ಹೆಚ್ಚಿನ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಕೋವಿಡ್ ಸಂದರ್ಭದಲ್ಲಿ ಎಸಿ ಕೋಚ್ಗಳಲ್ಲಿ ದಿಂಬು-ಬೆಡ್ ನೀಡುವುದನ್ನ ಸ್ಥಗಿತಗೊಳಿಸಿದ್ದ ಇಲಾಖೆ ಇದೀಗ ಪುನಾರಂಭಿಸಿದೆ.