ಫೈಸಲಾಬಾದ್: 1947 ರಲ್ಲಿ ದೇಶ ವಿಭಜನೆಯಿಂದ ಬೇರ್ಪಟ್ಟ ನಂತರ ಭಾರತೀಯ ಸಿಕಾ ಖಾನ್ ತನ್ನ ಪಾಕಿಸ್ತಾನಿ ಸಹೋದರನನ್ನು ಮೊದಲ ಬಾರಿಗೆ ಭೇಟಿಯಾದಾಗ ಸಂತೋಷದ ಕಣ್ಣೀರನ್ನು ಆತನಿಂದ ತಡೆಯಲಾಗಲಿಲ್ಲ. ಸಿಕಾನ ಹಿರಿಯ ಸಹೋದರನ ಹೆಸರು ಸಾದಿಕ್ ಖಾನ್. ದೇಶ ವಿಭಜನೆಯಾದಾಗ ಸಿಕಾಗೆ ಕೇವಲ ಆರು ತಿಂಗಳ ವಯಸ್ಸು.
ದೇಶ ವಿಭಜನೆಗೆ ಈ ವರ್ಷ 75 ನೇ ವಾರ್ಷಿಕೋತ್ಸವ. 75 ವರ್ಷಗಳ ಹಿಂದೆ ವಿಭಜನೆಯ ಸಮಯದಲ್ಲಿ ಸಂಭವಿಸಿದ ಧಾರ್ಮಿಕ ಹಿಂಸಾಚಾರದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನ ಜೀವ ತೆತ್ತರು. ಸಿಕಾ ಅವರಂಥ ಅನೇಕ ಕುಟುಂಬಗಳು ಬೇರ್ಪಟ್ಟವು ಅಥವಾ ನಾಶವಾದವು. ಇದೆಲ್ಲದರ ನಂತರ ಹುಟ್ಟಿದ್ದು ಎರಡು ಸ್ವತಂತ್ರ ದೇಶಗಳು - ಪಾಕಿಸ್ತಾನ ಮತ್ತು ಭಾರತ.
ಸಿಕಾ ಅವರ ತಂದೆ ಮತ್ತು ಸಹೋದರಿ ಕೋಮು ಹಿಂಸಾಚಾರದಲ್ಲಿ ಮೃತಪಟ್ಟಿದ್ದರು. ಆದರೆ ಕೇವಲ 10 ವರ್ಷ ವಯಸ್ಸಿನ ಸಾದಿಕ್ ಪಾಕಿಸ್ತಾನಕ್ಕೆ ಪಲಾಯನ ಮಾಡುವಲ್ಲಿ ಯಶಸ್ವಿಯಾದರು. "ನನ್ನ ತಾಯಿ ಆಘಾತವನ್ನು ಸಹಿಸಲಾರದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ನನ್ನನ್ನು ಬೆಳೆಸಿದ ಗ್ರಾಮಸ್ಥರು ಮತ್ತು ಕೆಲವು ಸಂಬಂಧಿಕರ ಕರುಣೆಯಿಂದ ನಾನು ಬದುಕಿ ಉಳಿದೆ" ಎಂದು ಸಿಕಾ ಪಶ್ಚಿಮ ಭಾರತದ ಪಂಜಾಬ್ ರಾಜ್ಯದ ಭಟಿಂಡಾದಲ್ಲಿ ತನ್ನ ಇಟ್ಟಿಗೆ ಮನೆಯಲ್ಲಿ ಕುಳಿತು ಆ ದಿನಗಳನ್ನು ನೆನಪಿಸಿಕೊಂಡರು.
ಬಾಲ್ಯದಿಂದಲೂ ಸಿಕಾ ತನ್ನ ಕುಟುಂಬದಲ್ಲಿ ಉಳಿದಿರುವ ಏಕೈಕ ಸದಸ್ಯ, ತನ್ನ ಸಹೋದರನ ಬಗ್ಗೆ ತಿಳಿದುಕೊಳ್ಳಲು ಹಂಬಲಿಸುತ್ತಿದ್ದ. ಮೂರು ವರ್ಷಗಳ ಹಿಂದೆ ಆತನ ನೆರೆಹೊರೆಯ ವೈದ್ಯರೊಬ್ಬರು ಈ ವಿಷಯದಲ್ಲಿ ಸಹಾಯ ಮಾಡಲು ಮುಂದಾಗಿದ್ದರು. ಹಲವಾರು ಫೋನ್ ಕರೆಗಳು ಮತ್ತು ಪಾಕಿಸ್ತಾನಿ ಯೂಟ್ಯೂಬರ್ ನಾಸಿರ್ ಧಿಲ್ಲೋನ್ ಅವರ ಸಹಾಯದ ನಂತರ, ಸಿಕಾ ಸಾದಿಕ್ ಜೋಡಿ ಮತ್ತೆ ಒಂದಾಗಲು ಸಾಧ್ಯವಾಯಿತು.
ಸಹೋದರರು ಅಂತಿಮವಾಗಿ ಜನವರಿಯಲ್ಲಿ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಭೇಟಿಯಾದರು. ಇದು ಅಪರೂಪದ ವೀಸಾ ಮುಕ್ತ ಕ್ರಾಸಿಂಗ್ ಪ್ರದೇಶವಾಗಿದ್ದು, ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಪಾಕಿಸ್ತಾನದ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. 2019 ರಲ್ಲಿ ಪ್ರಾರಂಭವಾದ ಈ ಕಾರಿಡಾರ್, ಎರಡು ರಾಷ್ಟ್ರಗಳ ನಡುವಿನ ದೀರ್ಘಕಾಲದ ಹಗೆತನದ ಹೊರತಾಗಿಯೂ ಬೇರ್ಪಟ್ಟ ಕುಟುಂಬಗಳ ಏಕತೆ ಮತ್ತು ಸಾಮರಸ್ಯದ ಸಂಕೇತವಾಗಿದೆ.
"ನಾನು ಭಾರತದವನು ಮತ್ತು ಅವನು ಪಾಕಿಸ್ತಾನದವನು, ಆದರೆ ನಾವು ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತೇವೆ" ಎಂದು ಮಸುಕಾದ ಹಳೆಯ ತಮ್ಮ ಕುಟುಂಬದ ಛಾಯಾಚಿತ್ರವನ್ನು ಹಿಡಿದ ಸಿಕಾ ಹೇಳಿದರು.
"ಎರಡೂ ದೇಶಗಳು ಹೋರಾಡುತ್ತಲೇ ಇರುತ್ತವೆ. ಆದರೆ ನಾವು ಭಾರತ-ಪಾಕಿಸ್ತಾನ ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ." ಎನ್ನುತ್ತಾರೆ ಧಿಲ್ಲೋನ್. ಇವರು 38 ವರ್ಷ ವಯಸ್ಸಿನ ಪಾಕಿಸ್ತಾನಿ ರೈತ ಮತ್ತು ರಿಯಲ್ ಎಸ್ಟೇಟ್ ಏಜೆಂಟ್. ಇವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸುಮಾರು 300 ಕುಟುಂಬಗಳು ಮತ್ತೆ ಒಂದುಗೂಡಲು ಸಹಾಯ ಮಾಡಿದ್ದಾರೆ.