ನವದೆಹಲಿ : ಪಾಕ್ ಬೆಂಬಲಿತ ಹಾಗೂ ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ನ ನಾಲ್ವರು ಸದಸ್ಯರಿಗೆ 10 ವರ್ಷ ಜೈಲು ಶಿಕ್ಷೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಜುಲೈ 13 ಬುಧವಾರ ದಂದು ವಿಧಿಸಿದೆ. ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಶಿಕ್ಷೆಗೊಳಗಾದ ದಾನಿಶ್ ಅನ್ಸಾರಿ, ಅಫ್ತಾಬ್ ಆಲಂ, ಇಮ್ರಾನ್ ಖಾನ್ ಮತ್ತು ಒಬೈದ್-ಉರ್-ರೆಹಮಾನ್ ಆರೋಪಿಗಳು. ದಾನಿಶ್ ಅನ್ಸಾರಿಗೆ 2000 ರೂ. ಮತ್ತು ಅಫ್ತಾಬ್ ಆಲಂಗೆ 10000 ರೂ. ದಂಡ ವಿಧಿಸಿದೆ. ಈ ಹಿಂದೆ ಯಾಸಿನ್ ಭಟ್ಕಳ್ ಹಾಗೂ ಇತರ 10 ಜನರ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ದೋಷಾರೋಪ ದಾಖಲು ಮಾಡುವಂತೆ ಆದೇಶ ನೀಡಿತ್ತು. ಈ ನಾಲ್ವರು ಎನ್ಐಎಯ ಮೋಸ್ಟ್ ವಾಟೆಂಡ್ ಪಟ್ಟಿಯಲ್ಲಿದ್ದ ರಿಯಾಜ್ ಭಟ್ಕಳ್ ಮತ್ತು ಯಾಸಿನ್ ಭಟ್ಕಳ್ ಸೇರಿದಂತೆ ಐಎಂ ಸದಸ್ಯರೊಂದಿಗೆ ನಿಕಟ ಒಡನಾಟ ಹೊಂದಿದ್ದು, ಹೈದರಾಬಾದ್, ದೆಹಲಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಿದ್ದರು.
ಅಲ್ಲದೇ ಸ್ಫೋಟಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು. ಹೀಗಾಗಿ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ ಅಡಿ ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಭಯೋತ್ಪಾದನಾ ನಿಗ್ರಹ ಸಂಸ್ಥೆ ತಿಳಿಸಿದೆ. ಮಾರ್ಚ್ 31 ರಂದು ಎನ್‌ಐಎ ವಿಶೇಷ ನ್ಯಾಯಾಲಯವು ಈ ನಾಲ್ವರು ಆರೋಪಿಗಳು ಸೇರಿದಂತೆ ಇತರೆ 7 ಆರೋಪಿಗಳಾದ ಯಾಸಿನ್ ಭಟ್ಕಳ್, ಅಸಾದುಲ್ಲಾ ಅಖ್ತರ್, ಜಿಯಾ-ಉರ್-ರೆಹಮಾನ್, ತೆಹ್ಸಿನ್ ಅಖ್ತರ್ ಮತ್ತು ಹೈದರ್ ಅಲಿ ವಿರುದ್ದ ಬಾಂಬ್ ಸ್ಪೋಟ್ ಸಂಚು ರೂಪಿಸಿದ ಆರೋಪಗಳನ್ನು ನಿಗದಿಪಡಿಸಲಾಗಿತ್ತು.
21 ಫೆಬ್ರವರಿ 2013 ರಂದು ಹೈದರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ಎರಡು ಸ್ಫೋಟಗಳು ಸಂಭವಿಸಿದವು. ಇದರಲ್ಲಿ 18 ಮಂದಿ ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್, ಪಾಕಿಸ್ತಾನಿ ಪ್ರಜೆ ಜಿಯಾ ಉರ್ ರೆಹಮಾನ್ ಮತ್ತು ಇತರ ಮೂವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.
ಎಲ್ಲೆಲ್ಲಿ ಐಎಂ ಬಾಂಬ್ ಸ್ಫೋಟ : 2006ರ ಮಾರ್ಚ್ನಲ್ಲಿ ವಾರಾಣಸಿ ಸ್ಫೋಟ, ಜುಲೈ ವೇಳೆ ಮುಂಬೈನಲ್ಲಿ ಸರಣಿ ಸ್ಫೋಟಗಳು, 2007ರ ಆಗಸ್ಟ್ವೇಳೆ ಹೈದರಾಬಾದ್ನಲ್ಲಿ ನಡೆದ ಅವಳಿ ಸ್ಫೋಟ, ನವೆಂಬರ್ನಲ್ಲಿ ಲಖನೌ ಸ್ಫೋಟ, ಜೊತೆಗೆ ಜೈಪುರ ಸರಣಿ ಸ್ಫೋಟ, ದೆಹಲಿ ಸರಣಿ ಸ್ಫೋಟ ಮತ್ತು 2008 ರಲ್ಲಿ ಅಹಮದಾಬಾದ್ ಸರಣಿ ಸ್ಫೋಟಗಳು, 2010ರ ಚಿನ್ನಸ್ವಾಮಿ, ಬೆಂಗಳೂರು ಸ್ಟೇಡಿಯಂ ಸ್ಫೋಟ ಮತ್ತೆ ಅದೇ ವರ್ಷ ಹೈದರಾಬಾದ್ನಲ್ಲಿ ನಡೆದ ಅವಳಿ ಸ್ಫೋಟಗಳನ್ನು ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಕೇಸ್ಗಳಿಗೆ ಸಂಬಂಧಿಸಿದ ಪ್ರಕರಣವಿದು.
ಇದನ್ನೂ ಓದಿ : ಯಾಸಿನ್ ಭಟ್ಕಳ್ ಸೇರಿ 10 ಜನರ ವಿರುದ್ಧ ದೋಷರೋಪ ದಾಖಲಿಸಲು ಕೋರ್ಟ್ ಆದೇಶ