ನವದೆಹಲಿ: ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣದಲ್ಲಿ ಭಾರತದ ಹಸ್ತಕ್ಷೇಪವಿದೆ ಎಂದು ಆರೋಪಿಸಿರುವ ಕೆನಡಾ ಸರ್ಕಾರ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತದ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಉಚ್ಛಾಟಿಸಿತ್ತು. ಈ ಬೆಳವಣಿಗೆಯ ಕೆಲವೇ ಗಂಟೆಗಳಲ್ಲಿ ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸುವ ಮೂಲಕ ಭಾರತ ಕೆನಡಾ ದೇಶಕ್ಕೆ ಕಠಿಣ ಸಂದೇಶ ರವಾನಿಸಿದೆ.
ಈ ಬಗ್ಗೆ ತಿಳಿಸಲು ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಕೆಮರೂನ್ ಮೆಕೆ ಅವರನ್ನು ನವದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಚೇರಿಗೆ ಇಂದು ಕರೆಸಲಾಗಿತ್ತು. ಈ ಸಂದರ್ಭದಲ್ಲಿ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಉಚ್ಛಾಟನೆ ಮಾಡುವ ಭಾರತ ಸರ್ಕಾರದ ನಿರ್ಧಾರವನ್ನು ತಿಳಿಸಲಾಗಿದೆ.
ಅಲ್ಲದೇ, ಉಚ್ಚಾಟಿತ ಅಧಿಕಾರಿ ಮುಂದಿನ ಐದು ದಿನಗಳಲ್ಲಿ ಭಾರತ ತೊರೆಯುವಂತೆ ಸೂಚಿಸಿರುವುದಾಗಿ ಸಚಿವಾಲಯ ಹೇಳಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ರಾಜತಾಂತ್ರಿಕರ ಹಸ್ತಕ್ಷೇಪ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಉಚ್ಚಾಟಿತ ಅಧಿಕಾರಿ ತೊಡಗಿಸಿಕೊಂಡಿದ್ದು, ದೇಶದ ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಜೂನ್ 18ರಂದು ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಭಾಗಿಯಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದಾದ ಬಳಿಕ ಕೆನಡಾದಲ್ಲಿನ ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಸರ್ಕಾರ ಉಚ್ಛಾಟನೆ ಮಾಡಿದೆ.
ಇದರ ಬೆನ್ನಲ್ಲೇ ಕೆನಡಾ ಆರೋಪವನ್ನು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿತ್ತು. ಕೆನಡಾ ಸರ್ಕಾರದ ಎಲ್ಲಾ ಆರೋಪಗಳು ಅಸಂಬದ್ಧ ಮತ್ತು ಪ್ರಚೋದಿತ ಉದ್ದೇಶ ಹೊಂದಿದೆ. ಭಾರತ ಕಾನೂನು ಸುವ್ಯವಸ್ಥೆಯ ಮೇಲೆ ಬದ್ಧತೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರ. ಈ ರೀತಿಯ ಆಧಾರರಹಿತ ಆರೋಪ ಖಲಿಸ್ತಾನಿ ಭಯೋತ್ಪಾದಕರ ಗಮನ ಬೇರೆಡೆ ಸೆಳೆಯುವ ಪ್ರಯತ್ನದ ಭಾಗವಾಗಿದೆ.
ಕೆನಡಾದಲ್ಲಿ ಆಶ್ರಯ ಪಡೆದಿರುವ ಖಲಿಸ್ತಾನಿ ಉಗ್ರಗಾಮಿಗಳು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಚಿವಾಲಯ ಎದುರೇಟು ನೀಡಿದೆ. ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಕೆನಡಾ ಮೊದಲು ಕ್ರಮ ಕೈಗೊಳ್ಳಲಿ. ಅಲ್ಲಿ ಮಾನವ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧಗಳು ಸೇರಿದಂತೆ ಹಲವಾರು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಹೊಸದೇನಲ್ಲ. ಇದಕ್ಕೆಲ್ಲ ಭಾರತವನ್ನು ದೂಷಿಸುವುದು ಸರಿಯಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪ ತಿರಸ್ಕರಿಸಿದ ಭಾರತ