ವಡೋದರಾ (ಗುಜರಾತ್): "ಭಾರತ ಮತ್ತು ಪಾಕಿಸ್ತಾನ "ಐಟಿ"ಯಲ್ಲಿ ಅಭಿವೃದ್ಧಿ ಸಾಧಿಸಿವೆ. ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ(ಐಟಿ) ಭಾರತ ಮುನ್ನುಗ್ಗುತ್ತಿದ್ದರೆ, ನೆರೆಯ ಪಾಕಿಸ್ತಾನ ಅಂತಾರಾಷ್ಟ್ರೀಯ ಟೆರರಿಸಂ(ಐಟಿ)ನಲ್ಲಿ ಅಭಿವೃದ್ಧಿ ಸಾಧಿಸಿದೆ" ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪಾಕಿಸ್ತಾನವನ್ನು ಮೂದಲಿಸಿದರು.
"ನೆರೆರಾಷ್ಟ್ರ ಅಂತಾರಾಷ್ಟ್ರೀಯ ಭಯೋತ್ಪಾದನೆಯಲ್ಲಿ ಪರಿಣತಿ ಹೊಂದಿದೆ. ಇಂದು ನೀವು ನಮ್ಮ ವಿರುದ್ಧ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದ್ದರೆ, ನಾಳೆ ಅದು ನಿಮ್ಮ ವಿರುದ್ಧವೂ ಕೆಲಸ ಮಾಡಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಗುಜರಾತ್‌ನ ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೈಶಂಕರ್ ಅವರು, "ಭಾರತ ಮಾಹಿತಿ ತಂತ್ರಜ್ಞಾನದಲ್ಲಿ ಪರಿಣತಿ ಹೊಂದುತ್ತಿದ್ದರೆ, ಪಕ್ಕದ ಪಾಕಿಸ್ತಾನ ಭಯೋತ್ಪಾದನೆಯಲ್ಲಿ ನಿಸ್ಸೀಮರಾಗುತ್ತಿದ್ದಾರೆ. ಇದರಿಂದ ದೇಶ ಹಿನ್ನಡೆ ಅನುಭವಿಸುತ್ತದೆಯೇ ಹೊರತು ಅಭಿವೃದ್ಧಿ ಕಾಣದು" ಎಂದು ಅಭಿಪ್ರಾಯಪಟ್ಟರು.
ಈಶಾನ್ಯ ಭಾರತದಲ್ಲಿ ನಿಂತ ಭಯೋತ್ಪಾದನೆ: ಈಶಾನ್ಯ ಭಾರತದಲ್ಲಿ ನಡೆಯುತ್ತಿದ್ದ ಭಯೋತ್ಪಾದನೆಯ ಬಗ್ಗೆ ಮಾತನಾಡಿದ ಜೈಶಂಕರ್, ಆ ಭಾಗದಲ್ಲಿ ಹಿಂದೆ ಉಗ್ರವಾದ ತಾಂಡವವಾಡುತ್ತಿತ್ತು. ಬಾಂಗ್ಲಾದೇಶದ ಜೊತೆ ಭಾರತ ಒಪ್ಪಂದ ಮಾಡಿಕೊಂಡು ಉಗ್ರರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಿದ ಬಳಿಕ ಅಲ್ಲಿ ನರಮೇಧ ನಿಂತಿದೆ. ಇದರಿಂದ ಈಶಾನ್ಯ ಭಾಗ ಭಯೋತ್ಪಾದನೆ ಹಿಡಿತದಿಂದ ಹೊರಬಂದಿದೆ ಎಂದು ಹೇಳಿದರು.
ಒತ್ತಡಕ್ಕೆ ಮಣಿಯದ ಮೋದಿ: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಜಾಗತಿಕವಾಗಿ ಒತ್ತಡ ಬಂದರೂ ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಭಾಯಿಸಿದ ರೀತಿಯನ್ನು ವಿದೇಶಾಂಗ ಸಚಿವರು ಹೊಗಳಿದರು.
ರಷ್ಯಾ- ಉಕ್ರೇನ್ ಸಂಘರ್ಷದಿಂದಾಗಿ ತೈಲ ಬೆಲೆ ಏರುತ್ತಿದೆ. ತೈಲವನ್ನು ಎಲ್ಲಿ ಖರೀದಿಸಬೇಕು ಎಂಬ ಒತ್ತಡಕ್ಕೆ ಸಿಲುಕಿದ್ದೆವು. ಆದರೆ, ಪ್ರಧಾನಿ ಮೋದಿ ಮತ್ತು ಸರ್ಕಾರ ರಷ್ಯಾದಿಂದ ಅಗ್ಗದ ದರದಲ್ಲಿ ಖರೀದಿಸಿತು. ಇದರ ವಿರುದ್ಧ ಒತ್ತಡ ಕೇಳಿಬಂದಾಗ ಅದನ್ನು ನಿಭಾಯಿಸಿದರು. ಉತ್ತಮವಾದುದನ್ನು ಮಾಡುವಾಗ ಬರುವ ಒತ್ತಡವನ್ನು ಎದುರಿಸಿ ಎಂದು ಸಲಹೆ ನೀಡಿದರು.
ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ರಷ್ಯಾದ ಯುದ್ಧವನ್ನು ಉಲ್ಲೇಖಿಸಿ ಇದು ಯುದ್ಧದ ಸಮಯವಲ್ಲ ಎಂದು ಹೇಳಿಕೆ ನೀಡಿ, ಪರೋಕ್ಷವಾಗಿ ಉಕ್ರೇನ್ ಯುದ್ಧವನ್ನು ನಿಲ್ಲಿಸುವಂತೆ ರಷ್ಯಾಕ್ಕೆ ಸಲಹೆ ನೀಡಿದ್ದರು. ಇದು ಜಾಗತಿಕವಾಗಿ ಸದ್ದು ಮಾಡಿತ್ತು. ಹಲವು ಪತ್ರಿಕೆಗಳು ಈ ಬಗ್ಗೆ ಉಲ್ಲೇಖಿಸಿ ವರದಿ ಮಾಡಿದ್ದವು.
ಓದಿ: ರಾಗಾ ಜೊತೆ 1.5 ಕಿ.ಮೀ ನಡೆದ ಮೆಡಿಕಲ್ ವಿದ್ಯಾರ್ಥಿನಿ: ಫಿಟ್ನೆಸ್, ಆಯುರ್ವೇದದ ಬಗ್ಗೆ ಚರ್ಚೆ