ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ): ಈಶಾನ್ಯ ಭಾರತ ಮತ್ತು ಉತ್ತರ ಭಾರತದ ಭಾಗದಲ್ಲಿ ಹಿಮಪಾತ ಮುಂದುವರೆದಿದ್ದು, ಪ್ರತಿಕೂಲ ಹವಾಮಾನದಿಂದ ಜನರು ಮತ್ತು ಪ್ರವಾಸಿಗರು ಸಮಸ್ಯೆ ಎದುರಿಸುವಂತೆ ಆಗಿದೆ. ಇದರ ನಡುವೆ ಪೂರ್ವ ಸಿಕ್ಕಿಂನಲ್ಲಿ ಭಾರಿ ಹಿಮಪಾತದಲ್ಲಿ ಸಿಲುಕಿಕೊಂಡಿದ್ದ ಅಂದಾಜು ಒಂದು ಸಾವಿರ ಪ್ರವಾಸಿಗರನ್ನು ಭಾರತೀಯ ಸೇನೆ ಸುರಕ್ಷಿತವಾಗಿ ರಕ್ಷಣೆ ಮಾಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ಪೂರ್ವ ಸಿಕ್ಕಿಂನ ಚಂಗು ಸರೋವರ ಸಮೀಪ ಹಿಮಪಾತದಲ್ಲಿ ಸಿಲುಕಿದ್ದ ಸುಮಾರು 400 ಜನ ಪ್ರವಾಸಿಗರನ್ನು ಪೊಲೀಸರು ಮತ್ತು ಯೋಧರು ಜಂಟಿಯಾಗಿ 'ಆಪರೇಷನ್ ಹಿಮ್ರಾಹತ್' ಮೂಲಕ ರಕ್ಷಿಸಿದ್ದರು. ಇದೀಗ ಮತ್ತೆ ಪೂರ್ವ ಸಿಕ್ಕಿಂನ ಛಂಗು ಪ್ರದೇಶದಲ್ಲಿ ಹಿಮಪಾತದಿಂದ ತೊಂದರೆಯಲ್ಲಿ ಸಿಲುಕಿದ್ದ ಒಂದು ಸಾವಿರ ಜನರನ್ನು ಭದ್ರತಾ ಪಡೆಗಳು ಪಾರು ಮಾಡಿವೆ.
ಬುಧವಾರ ಮಧ್ಯಾಹ್ನದಿಂದ ಪೂರ್ವ ಸಿಕ್ಕಿಂನ ಚಂಗು, ನಾಥುಲಾ ಹಾಗೂ ಸುತ್ತಮುತ್ತಲಿನ ಅನೇಕ ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗಿದೆ. ಇದರಿಂದಾಗಿ ವಾತಾವರಣ ಬಹುತೇಕ ಶೂನ್ಯಕ್ಕೆ ಕುಸಿದಿದೆ. ರಸ್ತೆಗಳೆಲ್ಲ ಹಿಮದಿಂದ ಆವೃತಗೊಂಡಿವೆ. ವಾಹನ ಸಂಚಾರವೂ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಪರೀತ ಚಳಿಯಲ್ಲೇ ಪ್ರವಾಸಿಗರು ರಸ್ತೆಗಳ ಮಧ್ಯೆಯೇ ಸಿಲುಕಿಕೊಂಡಿದ್ದರು.
15 ಕಿಲೋ ಮೀಟರ್‌ವರೆಗೆ ಟ್ರಾಫಿಕ್ ಜಾಮ್: ಪ್ರಮುಖವಾಗಿ ಭಾರಿ ಹಿಮಪಾತದಿಂದಾಗಿ ರಸ್ತೆ ಅಪಾಯಕಾರಿಯಾಗಿ ಮಾರ್ಪಟ್ಟಿವೆ. ಚಂಗು ಪ್ರದೇಶದಿಂದ ಗ್ಯಾಂಗ್‌ಟಾಕ್‌ಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾದ ಜವಾಹರಲಾಲ್ ನೆಹರು ಮಾರ್ಗದಲ್ಲಿ ಹಿಮದ ರಾಶಿಯಲ್ಲಿ ಮುಂದಕ್ಕೆ ಚಲಿಸಲು ಸಾಧ್ಯವಾಗದೇ ವಾಹನಗಳು ಸ್ಕಿಡ್ ಆಗುತ್ತಿದ್ದವು. ಇದರಿಂದ ಪ್ರವಾಸಿಗರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 15 ಕಿಲೋ ಮೀಟರ್‌ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು ಎಂದು ತಿಳಿದು ಬಂದಿದೆ.
ಇದೇ ವೇಳೆ ಹಿಮಪಾತದಿಂದಾಗಿ ರಸ್ತೆಯಲ್ಲೇ ಪ್ರವಾಸಿಗರಿದ್ದ ನೂರಾರು ಕಾರುಗಳು ಸಿಕ್ಕಿಹಾಕಿಕೊಂಡಿದ್ದವು. ಆದ್ದರಿಂದ ಸಿಕ್ಕಿಂ ಆಡಳಿತವು ಸಹಾಯಕ್ಕಾಗಿ ಭಾರತೀಯ ಸೇನೆಯ ಮೊರೆ ಹೋಗಿತ್ತು. ಅಂತೆಯೇ, ತಕ್ಷಣ ಕಾರ್ಯಪ್ರವೃತವಾದ ಸೇನೆಯ ಸಿಬ್ಬಂದಿ ರಕ್ಷಣಾ ಕಾರ್ಯ ಆರಂಭಿಸಿದರು. ಎಂಟು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯದಲ್ಲಿ ಸಿಕ್ಕಿಂ ಪೊಲೀಸರು ಕೂಡ ಯೋಧರೊಂದಿಗೆ ಕೈಜೋಡಿಸಿದರು.
ಪೊಲೀಸರು ಮತ್ತು ಯೋಧರು ಜಂಟಿ ಕಾರ್ಯಾಚರಣೆ ನಡೆಸಿ ಎಲ್ಲ ಪ್ರವಾಸಿಗರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು. ಅಲ್ಲದೇ, ಅಲ್ಲಿ ಪ್ರವಾಸಿಗರಿಗೆ ಬೆಚ್ಚಗಿನ ಬಟ್ಟೆಗಳು, ಆಹಾರ ಮತ್ತು ವೈದ್ಯಕೀಯ ನೆರವಿನ ವ್ಯವಸ್ಥೆ ಮಾಡಲಾಯಿತು. ಬಳಿಕ ರಸ್ತೆಯಲ್ಲಿ ಹಿಮ ತೆರವುಗೊಳಿಸುವ ಕಾರ್ಯ ಪ್ರಾರಂಭಿಸಿದರು. ಮತ್ತೊಂದೆಡೆ, ಬೆಳಗ್ಗೆಯಿಂದಲೇ ಪ್ರವಾಸಿಗರನ್ನು ಗ್ಯಾಂಗ್‌ಟಕ್‌ಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.
ಈ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಭಾರತೀಯ ಸೇನೆಯ ಕರ್ನಲ್ ಅಂಜನ್ ಕುಮಾರ್ ಬಸುಮತರಿ, ಇತ್ತೀಚೆಗೆ ಅನೇಕ ಪ್ರವಾಸಿಗರು ಹಿಮಪಾತದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಈ ಹಿಂದೆ ಅನೇಕರನ್ನು ರಕ್ಷಣೆ ಮಾಡಲಾಗಿತ್ತು. ಆದರೆ, ಈ ಬಾರಿ ರಕ್ಷಿಸಿದ ಪ್ರವಾಸಿಗರ ಸಂಖ್ಯೆ ದೊಡ್ಡದಾಗಿದೆ. ನಮ್ಮ ಯೋಧರು ಬಹಳ ಎಚ್ಚರಿಕೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ, ಪ್ರತಿಯೊಬ್ಬ ಪ್ರವಾಸಿಗರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು ಎಂದು ಹೇಳಿದರು.
ಇದನ್ನೂ ಓದಿ: ಹಿಮದಲ್ಲಿ ಸಿಲುಕಿದ್ದ 100 ವಾಹನಗಳು: 50 ಮಕ್ಕಳು ಸೇರಿ 370 ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ