ನವದೆಹಲಿ : 'ಶಾಂತಿರ್ ಒಗ್ರೋಶೆನಾ- 2021' (ಶಾಂತಿಯ ಮಂಚೂಣಿ ಓಟಗಾರ) ಎಂಬ ಬಹುರಾಷ್ಟ್ರೀಯ ಮಿಲಿಟರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತೀಯ ಸೇನಾ ನಿಯೋಗ ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ತಲುಪಿದೆ.
ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಮತ್ತು ಬಾಂಗ್ಲಾದೇಶದ ವಿಮೋಚನೆಯ ಸುವರ್ಣ ಮಹೋತ್ಸವದ ನೆನಪಿಗಾಗಿ ಏಪ್ರಿಲ್ 4 ರಿಂದ 12ರವರೆಗೆ ಬಹುರಾಷ್ಟ್ರೀಯ ಮಿಲಿಟರಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ಓದಿ : ಇಂಡೋ-ಪಾಕ್ ಗಡಿಯಲ್ಲಿ ಶಸ್ತ್ರಾಸ್ತ್ರಗಳು ವಶಕ್ಕೆ
ಸೇನಾ ಅಧಿಕಾರಿಗಳು, ಕಿರಿಯ ಆಯೋಗದ ಅಧಿಕಾರಿಗಳು (ಜೆಸಿಒಗಳು) ಮತ್ತು ಡೋಗ್ರಾ ರೆಜಿಮೆಂಟ್ ಬೆಟಾಲಿಯನ್‌ನ ಜವಾನರು ಸೇರಿ ಭಾರತೀಯ ಸೇನೆಯ 30 ಸಿಬ್ಬಂದಿಯನ್ನು ಒಳಗೊಂಡ ತುಕಡಿಯನ್ನು ಢಾಕಾದಲ್ಲಿ ಬಾಂಗ್ಲಾ ಸೇನೆಯು ಔಪಚಾರಿಕವಾಗಿ ಸ್ವಾಗತಿಸಿತು. ಬಳಿಕ ಭಾರತೀಯ ಸೇನಾ ಸಿಬ್ಬಂದಿ ಕೋವಿಡ್ ಆರ್-ಪಿಸಿಆರ್ ಪರೀಕ್ಷೆಗೊಳಗಾದರು.
ಭಾರತೀಯ ಸೇನೆಯ ಹೊರತಾಗಿ, ರಾಯಲ್ ಭೂತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇನಾ ತುಕಡಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಶಾಂತಿ ಪಾಲನೆಯನ್ನು ದೃಢಗೊಳಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಯುಎಸ್ಎ, ಯುಕೆ, ಟರ್ಕಿ, ಸೌದಿ ಅರೇಬಿಯಾ, ಕುವೈತ್ ಮತ್ತು ಸಿಂಗಾಪುರದ ಮಿಲಿಟರಿ ವೀಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಾರತೀಯ ಸೇನೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.