ಬೋಮ್ಡಿಲಾ (ಅರುಣಾಚಲ ಪ್ರದೇಶ): ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಗುರುವಾರ ಪತನಗೊಂಡಿದೆ. ಬೆಳಗ್ಗೆ 9:15ರ ಸುಮಾರಿಗೆ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡಿತ್ತು. ಸೇನೆಯ ಪ್ರಕಾರ, ಹೆಲಿಕಾಪ್ಟರ್ ಬೋಮ್ಡಿಲಾದ ಪಶ್ಚಿಮಕ್ಕೆ ಮಂಡಲಾ ಎಂಬ ಪ್ರದೇಶದ ಬಳಿ ಪತನಗೊಂಡಿದೆ. ಈ ಘಟನೆಯಲ್ಲಿ ಪೈಲಟ್‌ಗಳು ಮೃತಪಟ್ಟಿದ್ದಾರೆ.
ಭಾರತೀಯ ವಾಯುಪಡೆ ಮತ್ತು ಸೇನೆಯಲ್ಲಿ ಬಳಕೆಯಲ್ಲಿರುವ ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್‌ಗಳು ಬಹಳ ಹಳೆಯವಾಗಿದ್ದು, ಇವನ್ನು ಬದಲಿಸುವ ಬೇಡಿಕೆ ಬಹಳ ದಿನದಿಂದ ಇದೆ. ಆದರೆ ಅತಿ ಎತ್ತರದ ಪ್ರದೇಶಗಳಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿರುವ ಇವನ್ನು ಇನ್ನೂ ಸೇವೆಯಲ್ಲಿ ಮುಂದುವರಿಸಲಾಗಿದೆ. ಪ್ರಸ್ತುತ ಸುಮಾರು 200 ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳು ಸೇವೆಯಲ್ಲಿವೆ. ಭಾರತದ ಒಟ್ಟಾರೆ ಯುದ್ಧ ವಿಮಾನಗಳ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಸುಮಾರು 95 ಲಘು ಯುದ್ಧ ಹೆಲಿಕಾಪ್ಟರ್‌ಗಳು ಮತ್ತು 110 ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು (LUH) ಸೇನೆಗೆ ಸೇರಿಸಿಕೊಳ್ಳಲಾಗುವುದು ಎಂದು ಕಳೆದ ತಿಂಗಳು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದರು.
ಆಗಾಗ ಅಪಘಾತಕ್ಕೀಡಾಗುತ್ತಿರುವ ಚೀತಾ ಹೆಲಿಕಾಪ್ಟರ್‌ಗಳು: ಭಾರತೀಯ ಸೇನೆಯಲ್ಲಿರುವ ಲಘು ಯುದ್ಧ ಹೆಲಿಕಾಪ್ಟರ್ಗಳ ಪೈಕಿ ಚೀತಾ ಹೆಲಿಕಾಪ್ಟರ್ಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ಈ ಹೆಲಿಕಾಪ್ಟರ್‌ಗಳು ಈಗ ದೊಡ್ಡ ಕಳವಳದ ವಿಷಯವಾಗಿ ಮಾರ್ಪಟ್ಟಿವೆ. ಕಳೆದ ಸೆಪ್ಟೆಂಬರ್ನಲ್ಲಿ ಜಮ್ಮು ಮತ್ತು ಕಾಶ್ಮೀರ್ ಪಾಟ್ನಿಟಾಪ್ನಲ್ಲಿ ನಡೆದ ಚೀತಾ ಹೆಲಿಕಾಪ್ಟರ್ ಅಪಘಾತದಲ್ಲಿ ಇಬ್ಬರು ಆರ್ಮಿ ಅಧಿಕಾರಿಗಳು ಸಾವನ್ನಪ್ಪಿದ್ದರು. ಫೆಬ್ರವರಿ 2020 ರಲ್ಲಿ ಜಮ್ಮುವಿನ ರೇಸಿ ಪ್ರದೇಶದಲ್ಲಿ ಚೀತಾ ಹೆಲಿಕಾಪ್ಟರ್ ಪತನವಾಗಿತ್ತು. ಆದರೆ ಇದರಲ್ಲಿ ಯಾವುದೇ ಸಾವು - ನೋವು ಸಂಭವಿಸಿರಲಿಲ್ಲ. ಹಾಗೆಯೇ 2019 ರಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದರು.
ಸಿಯಾಚಿನ್‌ನಂಥ ಆಯಕಟ್ಟಿನ ಎತ್ತರಕ್ಕೆ ಹೋಗಲು ಯಾವುದೇ ರಸ್ತೆಗಳಿಲ್ಲ. ಹೀಗಾಗಿ ಇಂಥ ಸೇನಾ ನೆಲೆಗಳಲ್ಲಿ ಎತ್ತರದ ಕಾರ್ಯಾಚರಣೆಗಳಿಗೆ ಚೀತಾ ಅನಿವಾರ್ಯವಾಗಿದೆ. ಭಾರತೀಯ ಸೇನೆಯ ಮೆಚ್ಚಿನ ಹೆಲಿಕಾಪ್ಟರ್ ಆಗಿರುವ ಚೀತಾ, ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ ವೀಕ್ಷಣೆ, ಕಣ್ಗಾವಲು, ಲಾಜಿಸ್ಟಿಕ್ಸ್ ಮುಂತಾದ ಪಾತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಆದರೆ, ಈ ಚೀತಾ ಹೆಲಿಕಾಪ್ಟರ್‌ಗಳು ಆಗಾಗ ಪತನವಾಗುತ್ತಿವೆ. ಆರ್ಮಿ ಏವಿಯೇಷನ್ ಕಾರ್ಪ್ಸ್ ಮತ್ತು ಏರ್ ಫೋರ್ಸ್ ಸುಮಾರು 200 ಚೀತಾ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತವೆ.
ಕಳೆದ ಕೆಲ ವರ್ಷಗಳಲ್ಲಿ ಚೀತಾ ಹೆಲಿಕಾಪ್ಟರ್ ಒಳಗೊಂಡ 30 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ ಮತ್ತು ಪೈಲಟ್‌ಗಳು ಸೇರಿದಂತೆ ಸುಮಾರು 40 ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಈ ಹೆಲಿಕಾಪ್ಟರ್‌ಗಳಲ್ಲಿ ಸುಮಾರು 80 ಪ್ರತಿಶತ ಕಾಪ್ಟರ್ಗಳ 30 ವರ್ಷಗಳ ಜೀವಿತಾವಧಿ ಮುಗಿದಿದೆ. 2015 ರ ಆಂತರಿಕ ಮಾಹಿತಿಯಲ್ಲಿ, ಚೀತಾ ಹೆಲಿಕಾಪ್ಟರ್‌ಗಳು ವಾಸ್ತವಿಕವಾಗಿ ಸಾವಿನ ಕೂಪವಾಗಿ ಮಾರ್ಪಟ್ಟಿವೆ ಎಂದು ಸೇನಾ ಪ್ರಧಾನ ಕಚೇರಿ ಹೇಳಿತ್ತು.
ಇದನ್ನೂ ಓದಿ : ಹಿಮಾಚಲಪ್ರದೇಶ: ನಕ್ರೋಹ್ ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕಾಪ್ಟರ್