ನವದೆಹಲಿ: ರಕ್ಷಣಾ ಕ್ಷೇತ್ರದಲ್ಲೂ 'ಮೇಕ್ ಇನ್ ಇಂಡಿಯಾ' ಜಪ ಮಾಡುತ್ತಿರುವ ಕೇಂದ್ರ ಸರ್ಕಾರ ಈಗಾಗಲೇ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL)ನಿಂದ 83 ಯುದ್ಧ ವಿಮಾನ ತೇಜಸ್ ಖರೀದಿಗೆ ಅನುಮೋದನೆ ನೀಡಿದೆ.
ಚೀನಾ-ಪಾಕಿಸ್ತಾನ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಜೆಎಫ್-20 ಯುದ್ಧ ವಿಮಾನಕ್ಕಿಂತಲೂ ತೇಜಸ್ ಯುದ್ಧ ವಿಮಾನ ಹೆಚ್ಚು ಶಕ್ತಿಶಾಲಿ ಎಂದು ವಾಯುಪಡೆ ಮುಖ್ಯಸ್ಥರು ಹೇಳಿದ್ದಾರೆ. ವಾಯುಪಡೆ ಸಾಮರ್ಥ್ಯ ವೃದ್ಧಿಗೆ ಇದೊಂದು ದೊಡ್ಡ ಹೆಜ್ಜೆಯಾಗಿದ್ದು, ಸ್ಥಳೀಯ ಉದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದಿದ್ದಾರೆ.
ಬಾಲಕೋಟ್ ಮಾದರಿ ವೈಮಾನಿಕ ದಾಳಿ ನಡೆಸಲು ಭಾರತೀಯ ಜೆಟ್ ಉತ್ತಮವಾಗಿ ಸಜ್ಜುಗೊಳ್ಳಲಿದೆ ಎಂದಿರುವ ಅವರು, ಫೈಟರ್ ಜೆಟ್ಗಳು ವಾಯುಸೇನೆ ಸೇರುವುದರಿಂದ ನಮಗೆ ಮತ್ತಷ್ಟು ಬಲ ಬರಲಿದೆ ಎಂದಿದ್ದಾರೆ.
ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, 83 ಲಘು ಯುದ್ಧ ವಿಮಾನಗಳ ಖರೀದಿಯಿಂದ 50 ಸಾವಿರ ಉದ್ಯೋಗ ಸೃಷ್ಠಿಯಾಗಲಿವೆ ಎಂದು ತಿಳಿಸಿದ್ದರು.