ನವದೆಹಲಿ: ಗಡಿಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಚೀನಾದ ಪ್ರಯತ್ನವನ್ನು ಭಾರತ ಸಹಿಸುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು ಆರಂಭವಾಗುತ್ತಿದ್ದಂತೆ ರಾಜ್ಯಸಭೆಯಲ್ಲಿ ಭಾರತ ಮತ್ತು ಚೀನಾ ಬಾಂಧವ್ಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.
ರಾಜತಾಂತ್ರಿಕವಾಗಿ ನಾವು ಚೀನಾದೊಂದಿಗೆ ಸ್ಪಷ್ಟವಾಗಿದ್ದೇವೆ. ಎಲ್‌ಎಸಿ ಅನ್ನು ಏಕಪಕ್ಷೀಯವಾಗಿ ಬದಲಾಯಿಸುವ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ಅದನ್ನು ಚೀನಾ ಮುಂದುವರೆಸಿದರೆ ಮತ್ತು ಗಡಿ ಪ್ರದೇಶಗಳಲ್ಲಿ ತೀವ್ರ ಆತಂಕ ಉಂಟು ಮಾಡುವ ಶಕ್ತಿಗಳನ್ನು ನಿರ್ಮಿಸಿದರೆ, ನಮ್ಮ ಸಂಬಂಧವು ಸಾಮಾನ್ಯವಾಗಿ ಇರುವುದಿಲ್ಲ. ಕೆಲ ವರ್ಷಗಳಿಂದ ಇದು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಗಡಿ ಗಲಾಟೆ: ಕರ್ನಾಟಕ-ಮಹಾರಾಷ್ಟ್ರ ಸಂಸದರ ನಡುವೆ ಗದ್ದಲ
ಪ್ಯಾಲೆಸ್ತೀನ್ ಕುರಿತ ಭಾರತದ ಬದಲಾದ ನೀತಿ ಬಗ್ಗೆ ಪ್ರಕ್ರಿಯಿಸಿದ ಸಚಿವರು, ನಾವು ಪ್ಯಾಲೆಸ್ತೀನ್ ಬಗ್ಗೆಯೂ ಬಹಳ ಸ್ಪಷ್ಟವಾಗಿದ್ದೇವೆ. ಶಾಂತಿಯುತವಾಗಿ ಬದುಕುವ ನೀತಿಗೆ ನಾವು ಬೆಂಬಲಿಸುತ್ತೇವೆ. ಪ್ಯಾಲೆಸ್ತೀನ್ ನಿರಾಶ್ರಿತರ ಕಲ್ಯಾಣ ಸಂಸ್ಥೆಗೆ ನಮ್ಮ ಆರ್ಥಿಕ ಬೆಂಬಲ ಹೆಚ್ಚಾಗಿದೆ ಎಂದು ತಿಳಿಸಿದರು.
ಶ್ರೀಲಂಕಾದಲ್ಲಿನ ತಮಿಳರ ಪರಿಸ್ಥಿತಿ ಬಗ್ಗೆ ಜೈಶಂಕರ್ ಮಾತನಾಡಿ, ತಮಿಳು ಸಮುದಾಯ, ಸಿಂಹಳೀಯ ಸಮುದಾಯ ಮತ್ತು ಇತರ ಎಲ್ಲ ಸಮುದಾಯಗಳ ಜನರನ್ನು ಒಳಗೊಂಡಿರುವ ಸಂಪೂರ್ಣ ಶ್ರೀಲಂಕಾಕ್ಕೆ ಭಾರತ ಬೆಂಬಲ ನೀಡಿದೆ. ಗಂಭೀರ ಆರ್ಥಿಕ ಕುಸಿತಕ್ಕೆ ಒಳಗಾಗಿರುವ ನೆರೆ ರಾಷ್ಟ್ರಕ್ಕೆ ನೆರವು ನೀಡುವಲ್ಲಿ ಕೋಮುವಾದಿ ವಿಧಾನವನ್ನು ಅನುಸರಿಸಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಲೋಕಸಭೆ ಕಲಾಪ: ಕಾಂಗ್ರೆಸ್‌ನ ಅಧಿರ್ ರಂಜನ್ ಚೌಧರಿಗೆ ಸ್ಪೀಕರ್ ಎಚ್ಚರಿಕೆ