ನವದೆಹಲಿ: ಕೋವಿಡ್ನಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಮಾರ್ಚ್ 16(ಬುಧವಾರ)ದಿಂದ 12 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆಯನ್ನು ಮಾತ್ರ ಹಾಕಲಾಗುತ್ತದೆ ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ. ಭಾರತದಲ್ಲಿ ಕಾರ್ಬೆವಾಕ್ಸ್ ಅನ್ನು ಕೋವಿಡ್ ವಿರುದ್ಧದ ಲಸಿಕೆಗಳಲ್ಲಿ ಸೇರಿಸಲಾಗಿದ್ದು, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆ ಉಚಿತವಾಗಿ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ.
60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಅನ್ನು ನೀಡಲಾಗುತ್ತಿದೆ. ಎರಡನೇ ಡೋಸ್ ತೆಗೆದುಕೊಂಡ ದಿನಾಂಕದ ನಂತರ ಒಂಬತ್ತು ತಿಂಗಳ ಪೂರ್ಣಗೊಂಡ ಮೇಲೆ ಆದ್ಯತೆ ಮೇರೆಗೆ ಬೂಸ್ಟರ್ ಡೋಸ್ ಅನ್ನು ನೀಡಲಾಗುತ್ತದೆ ಎಂದು ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.
ಯಾವ ಕೋವಿಡ್ ಲಸಿಕೆಯನ್ನು ಮೊದಲು ಮತ್ತು ಎರಡನೇ ಬಾರಿಗೆ ತೆಗೆದುಕೊಳ್ಳಲಾಗುತ್ತದೆಯೋ ಅದೇ ಲಸಿಕೆಯನ್ನು ಬೂಸ್ಟರ್ ಡೋಸ್ನಲ್ಲಿಯೂ ತೆಗೆದುಕೊಳ್ಳಬೇಕೆಂದು ರಾಜೇಶ್ ಭೂಷಣ್ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ: ಪ್ರಧಾನಿ ಮೋದಿ ಕಠಿಣ ಸಂದೇಶ