ನವದೆಹಲಿ: ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ 180 ದೇಶಗಳಲ್ಲಿ ಕಳೆದ ವರ್ಷ 142ನೇ ಸ್ಥಾನದಿಂದ 150ನೇ ಸ್ಥಾನಕ್ಕೆ ಕುಸಿದಿದೆ ಎಂದು ಮಂಗಳವಾರ ಬಿಡುಗಡೆಯಾದ ಜಾಗತಿಕ ಮಾಧ್ಯಮ ವಾಚ್‌ಡಾಗ್ ವರದಿ ತಿಳಿಸಿದೆ. ನೇಪಾಳವನ್ನು ಹೊರತುಪಡಿಸಿ ಭಾರತದ ನೆರೆಯ ರಾಷ್ಟ್ರಗಳ ಶ್ರೇಯಾಂಕವು ಸಹ ಕುಸಿದಿದೆ. ಪಾಕಿಸ್ತಾನ 157ನೇ ಸ್ಥಾನ, ಶ್ರೀಲಂಕಾ 146ನೇ ಸ್ಥಾನ, ಬಾಂಗ್ಲಾದೇಶ 162ನೇ ಮತ್ತು ಮಯನ್ಮಾರ್ 176ನೇ ಸ್ಥಾನದಲ್ಲಿದೆ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (RSF) ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ಆರ್‌ಎಸ್‌ಎಫ್ 2022ರ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದ ಪ್ರಕಾರ, ನೇಪಾಳ ಜಾಗತಿಕ ಶ್ರೇಯಾಂಕದಲ್ಲಿ 30 ಅಂಕಗಳಿಂದ 76ನೇ ಸ್ಥಾನದಲ್ಲಿದೆ. ಕಳೆದ ವರ್ಷ ಸೂಚ್ಯಂಕದಲ್ಲಿ ಪಾಕಿಸ್ತಾನ 145ನೇ, ಶ್ರೀಲಂಕಾ 127ನೇ, ಬಾಂಗ್ಲಾದೇಶ 152ನೇ ಮತ್ತು ಮ್ಯಾನ್ಮಾರ್ 140ನೇ ಸ್ಥಾನದಲ್ಲಿತ್ತು. ಈ ವರ್ಷ, ನಾರ್ವೆ 1ನೇ ಸ್ಥಾನ, ಡೆನ್ಮಾರ್ಕ್ 2ನೇ, ಸ್ವೀಡನ್ 3ನೇ, ಎಸ್ಟೋನಿಯಾ 4ನೇ ಮತ್ತು ಫಿನ್ಲ್ಯಾಂಡ್ 5ನೇ ಉನ್ನತ ಸ್ಥಾನಗಳನ್ನು ಪಡೆದುಕೊಂಡರೆ, ಉತ್ತರ ಕೊರಿಯಾ ಕೊನೆಯ ಸ್ಥಾನದಲ್ಲಿದೆ. ಕಳೆದ ವರ್ಷ 150ನೇ ಸ್ಥಾನದಲ್ಲಿದ್ದ ರಷ್ಯಾ 155ನೇ ಸ್ಥಾನದಲ್ಲಿದ್ದರೆ, ಚೀನಾ ಎರಡು ಸ್ಥಾನ ಮೇಲೇರಿದ್ದು 175ನೇ ಸ್ಥಾನದಲ್ಲಿದೆ. ಕಳೆದ ವರ್ಷ ಚೀನಾ 177ನೇ ಸ್ಥಾನದಲ್ಲಿತ್ತು.
ಆರ್‌ಎಸ್‌ಎಫ್ ವೆಬ್‌ಸೈಟ್‌ನಲ್ಲಿ 'ಇಂಡಿಯಾ: ಮೀಡಿಯಾ ಫ್ರೀಡಂ ಅಂಡರ್ ಥ್ರೆಟ್' ಎಂಬ ಶೀರ್ಷಿಕೆಯ ವರದಿಯು, ಉದ್ಯೋಗದ ಅಭದ್ರತೆ ಹೆಚ್ಚುತ್ತಿರುವಾಗ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಗಳು ಘಾತೀಯವಾಗಿ ಏರಿಕೆ ಕಂಡಿವೆ. ಭಾರತೀಯ ಅಧಿಕಾರಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಗೌರವಿಸಬೇಕು ಮತ್ತು ಯಾವುದೇ ಪತ್ರಕರ್ತರನ್ನು ಅವರ ವಿಮರ್ಶಾತ್ಮಕ ವರದಿಗಾಗಿ ರಾಜಕೀಯಪ್ರೇರಿತ ಆರೋಪಗಳ ಮೇಲೆ ಬಂಧಿಸದಂತೆ ಒತ್ತಾಯಿಸಿದೆ.
ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪತ್ರಕರ್ತರು ಮತ್ತು ವಿಮರ್ಶಕರನ್ನು ಗುರಿಯಾಗಿಸಿಕೊಂಡು ಬೆದರಿಕೆಗಳು ಮತ್ತು ದಾಳಿಗಳ ಆರೋಪಗಳ ಬಗ್ಗೆ ಅಧಿಕಾರಿಗಳು ತ್ವರಿತ, ಸಂಪೂರ್ಣ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು. ಅಲ್ಲದೇ, ಪತ್ರಕರ್ತರು ತಮ್ಮ ಕೆಲಸ ಮಾಡಲು ತಮ್ಮ ಸ್ವಾತಂತ್ರ್ಯ ಮತ್ತು ತಮ್ಮ ಜೀವನವನ್ನು ಪಣಕ್ಕಿಡಬೇಕಾಗಿಲ್ಲ ಎಂದು ಆರ್‌ಎಸ್‌ಎಫ್ ಹೇಳಿದೆ.
ಇದನ್ನೂ ಓದಿ: ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ 142 ನೇ ಸ್ಥಾನ