ನವದೆಹಲಿ: ಶ್ರೀನಗರದಿಂದ ಶಾರ್ಜಾಗೆ ತೆರಳುವ ಗೋಫಸ್ಟ್ ಏರ್ಲೈನ್ (GoFirst airline) ವಿಮಾನಕ್ಕೆ ಪಾಕಿಸ್ತಾನ ಮಾರ್ಗವಾಗಿ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಪಾಕಿಸ್ತಾನಕ್ಕೆ ಭಾರತ ಮನವಿ ಮಾಡಿದೆ ಎಂದು ಸರ್ಕಾರಿ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ತನ್ನ ದೇಶದ ಮಾರ್ಗವಾಗಿ ಸಂಚರಿಸಲು ಅನುಮತಿ ನೀಡಿಲ್ಲ. ಈ ಮೂಲಕ ಅತ್ಯಂತದ ದೀರ್ಘವಾದ ಮಾರ್ಗದ ಮೂಲಕ ಯುಎಇಯ ಶಾರ್ಜಾಗೆ ಗೋಫಸ್ಟ್ ಏರ್ಲೈನ್ ಹಾರಾಟ ನಡೆಸಬೇಕಾಗಿ ಬಂದಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಗೋಫಸ್ಟ್ ಏರ್ಲೈನ್ಸ್ ಅನ್ನು ಮೊದಲ ಬಾರಿಗೆ ಗೋಏರ್ ಏರ್ಲೈನ್ಸ್ (GoAir Airlines) ಎಂದು ಕರೆಯಲಾಗುತ್ತಿತ್ತು. ಅಕ್ಟೋಬರ್ 23ರಿಂದ ಶ್ರೀನಗರ ಮತ್ತು ಶಾರ್ಜಾ ನಡುವೆ ಈ ಏರ್ಲೈನ್ಸ್ ತನ್ನ ಸೇವೆಯನ್ನು ಆರಂಭಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರ-ಶಾರ್ಜಾ ನಡುವಿನ ಮಾರ್ಗವನ್ನು ಉದ್ಘಾಟನೆ ಮಾಡಿದ್ದರು.
ಅಕ್ಟೋಬರ್ 23, 24, 26 ಮತ್ತು 28ರಂದು ಶ್ರೀನಗರ-ಶಾರ್ಜಾ ನಡುವೆ ಗೋಏರ್ ವಿಮಾನ ಹಾರಾಟಕ್ಕೆ ಪಾಕಿಸ್ತಾನ ಅಧಿಕಾರಿಗಳು ಅವಕಾಶ ನೀಡಿದ್ದರು. ಅದಾದ ನಂತರ ಕೆಲವು ಕಾರಣಗಳಿಂದಾಗಿ ಅಕ್ಟೋಬರ್ 31ರಿಂದ ನವೆಂಬರ್ 30ರವರೆಗೆ ವಿಮಾನ ಹಾರಾಟ ತಡೆ ಹಿಡಿಯಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಬೇಕೆಂದು ಪಾಕ್ ಸರ್ಕಾರವನ್ನು ಮತ್ತೊಮ್ಮೆ ಕೇಳಿದೆ. ಮಂಗಳವಾರವಷ್ಟೇ ಪಾಕ್ ಮಾರ್ಗದಲ್ಲಿ ಸಂಚಾರಕ್ಕೆ ಅನುಮತಿ ಸಿಗದ ಕಾರಣಕ್ಕೆ ದೀರ್ಘವಾದ ಮಾರ್ಗದ ಮೂಲಕ (ಗುಜರಾತ್ ಮಾರ್ಗವಾಗಿ) ಶಾರ್ಜಾಗೆ ವಿಮಾನ ಪ್ರಯಾಣ ಬೆಳೆಸಿತ್ತು.
ಪಾಕಿಸ್ತಾನದ ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಈ ವಿಚಾರ ತುಂಬಾ ದುರದೃಷ್ಟಕರ. 2009-2010ರಲ್ಲಿ ಶ್ರೀನಗರದಿಂದ ದುಬೈಗೆ ಹೊರಡುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಚಾರಕ್ಕೂ ಪಾಕಿಸ್ತಾನ ಅದೇ ರೀತಿ ಮಾಡಿತ್ತು ಎಂದಿದ್ದಾರೆ.
ಇದರ ಜೊತೆಗೆ ಈಗ ಮತ್ತೊಮ್ಮೆ ಇಂಥದ್ದೇ ಕ್ರಮ ಕೈಗೊಂಡಿದ್ದು, ಇದು ಎರಡೂ ದೇಶಗಳ ನಡುವಿನ ಸಂಬಂಧ ಹಳಸುವಂತೆ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಭಾರತ ಸರ್ಕಾರ ಪಾಕಿಸ್ತಾನದಿಂದ ಈ ಮೊದಲೇ ಅನುಮತಿ ಪಡೆದು ಮಾರ್ಗವನ್ನು ದೃಢಪಡಿಸಿಕೊಂಡಿರಲಿಲ್ಲ ಎಂದು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಏರ್ಗನ್ ಮಿಸ್ಫೈರ್ ಆಗಿ ಯುವಕ ಸಾವು: ನೂರು ಕಿ.ಮೀ ದೂರದ ಆಸ್ಪತ್ರೆ ಶಿಫಾರಸು ಮಾಡಿದ್ದ ವೈದ್ಯರು