ನವದೆಹಲಿ: ಮಹಾಮಾರಿ ಕೊರೊನಾ ಅಟ್ಟಹಾಸ ತಣ್ಣಗಾಗಿದ್ದ ಭಾರತದಲ್ಲಿ ಕಳೆದ 10 ದಿನಗಳಿಂದ ದಿಢೀರನೇ ಸಾವು - ನೋವಿನ ಪ್ರಮಾಣ ಹೆಚ್ಚಾಗಿದೆ. ಲಸಿಕೆ ಬಂತು, ಇನ್ನೇನು ಚಿಂತೆ ಇಲ್ಲ ಎನ್ನುವಷ್ಟರಲ್ಲಿ ವೈರಸ್ ಆರ್ಭಟಿಸಲು ಆರಂಭಿಸಿದೆ.
ಶನಿವಾರ ಒಂದೇ ದಿನದಲ್ಲಿ ಬರೋಬ್ಬರಿ 93,249 ಸೋಂಕಿತರು ಪತ್ತೆಯಾಗಿದ್ದಾರೆ. 513 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೀಗ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1,24,85,509 ಹಾಗೂ ಮೃತರ ಸಂಖ್ಯೆ 1,64,623ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಪ್ರಪಂಚದ ರಾಷ್ಟ್ರಗಳಲ್ಲಿ ದಿನವೊಂದರಲ್ಲಿ ವರದಿಯಾಗುತ್ತಿರುವ ಕೊರೊನಾ ಕೇಸ್ಗಳ ಪೈಕಿ ಅಮೆರಿಕವನ್ನೇ ಭಾರತ ಹಿಂದಿಕ್ಕಿದೆ.
ಹೆಚ್ಚಿದ ಆ್ಯಕ್ಟಿವ್ ಕೇಸ್
ಒಟ್ಟು 1.24 ಕೋಟಿ ಸೋಂಕಿತರಲ್ಲಿ 1,16,29,289 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಹೊಸ ಕೇಸ್ಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಒಂದು ಲಕ್ಷಕ್ಕೆ ಇಳಿಕೆ ಕಂಡಿದ್ದ ಸಕ್ರಿಯ ಪ್ರಕರಣಗಳು ಇದೀಗ 6,91,597ಕ್ಕೆ ಏರಿಕೆಯಾಗಿದೆ.
ಎರಡೂವರೆ ತಿಂಗಳಲ್ಲಿ 7.59 ಕೋಟಿ ಮಂದಿಗೆ ಲಸಿಕೆ
ಇತ್ತ ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಕೂಡ ಯಶಸ್ವಿಯಾಗಿಯೇ ನಡೆಯುತ್ತಿದೆ. ಇಲ್ಲಿಯವರೆಗೆ ಆರೋಗ್ಯ ಕಾರ್ಯಕರ್ತರು, ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು, 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲಾಗಿತ್ತು. ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೂ ವ್ಯಾಕ್ಸಿನ್ ನೀಡಲಾಗುತ್ತಿದೆ. ಜನವರಿ 16 ರಿಂದ ಈವರೆಗೆ ಒಟ್ಟು 7,59,79,651 ಮಂದಿಗೆ ಲಸಿಕೆ ಹಾಕಿಸಿಕೊಂಡಿದ್ದಾರೆ.