ನವದೆಹಲಿ: ದಾರುಣ ಕೊರೊನಾ ಪರಿಸ್ಥಿತಿಗೆ ಸಾಕ್ಷಿಯಾಗಿರುವ ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮತ್ತೆ ಹೊಸದಾಗಿ 4,14,188 ಸೋಂಕಿತರು ಪತ್ತೆಯಾಗಿದ್ದು, 3,915 ಜನರು ಕೊನೆಯುಸಿರೆಳೆದಿದ್ದಾರೆ.
ದೇಶದಲ್ಲಿನ ಕೋವಿಡ್ ಕೇಸ್ಗಳ ಸಂಖ್ಯೆ 2,14,91,598ಕ್ಕೆ ಏರಿಕೆಯಾಗಿದ್ದು, ಈವರೆಗೆ ಒಟ್ಟು 2,34,083 ಮಂದಿ ಬಲಿಯಾಗಿದ್ದಾರೆ. 2.14 ಕೋಟಿ ಪ್ರಕರಣಗಳ ಪೈಕಿ 36,45,164 ಕೇಸ್ಗಳು ಸಕ್ರಿಯವಾಗಿವೆ. ಒಂದೇ ದಿನ 3,31,507 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 1,76,12,351 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
3ನೇ ಅಲೆ ಮತ್ತಷ್ಟು ಭೀಕರ
ಕೊರೊನಾ ಮೂರನೇ ಅಲೆ ಇನ್ನಷ್ಟು ಭೀಕರವಾಗಿರಬಹುದು. ಲಸಿಕೆ ಹಾಕಿಸಿಕೊಂಡ 18 ವರ್ಷ ಮೇಲ್ಪಟ್ಟವರು 3ನೇ ಅಲೆಯಲ್ಲಿ ಸುರಕ್ಷಿತರಾಗಿರುತ್ತಾರೆ. ಒಂದೊಮ್ಮೆ ಅವರಿಗೆ ಸೋಂಕು ತಗುಲಿದರೂ ಅವರು ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ಹೊಂದಿರುತ್ತಾರೆ. ಆದರೆ ಮಕ್ಕಳಿಗೆ ಇನ್ನೂ ವ್ಯಾಕ್ಸಿನೇಷನ್ ಆರಂಭಿಸದ ಕಾರಣ ಅವರ ಮೇಲೆ ವೈರಸ್ ಹೆಚ್ಚು ಪ್ರಭಾವ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
16.49 ಮಂದಿಗೆ ಲಸಿಕೆ
ಜನವರಿ 16ರಿಂದ ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಆರಂಭವಾಗಿದ್ದು, ಗುರುವಾರದವರೆಗೆ ಒಟ್ಟು 16,49,73,058 ಮಂದಿಗೆ ಲಸಿಕೆ ನೀಡಲಾಗಿದೆ. ವ್ಯಾಕ್ಸಿನ್ ಅಭಾವದಿಂದಾಗಿ 18 ವರ್ಷ ಮೇಲ್ಪಟ್ಟವರು ನೋಂದಣಿ ಮಾಡಿಸಿದರೂ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರ ಸಮಯ-ಸ್ಥಳ ನಿಗದಿ ಮಾಡುತ್ತಿಲ್ಲ.