ನವದೆಹಲಿ: ಬೃಹತ್ ಚುನಾವಣಾ ರ‍್ಯಾಲಿಗಳು, ಕುಂಭಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳು, ಜನರ ನಿರ್ಲಕ್ಷ್ಯದಿಂದಾಗಿ ಇಂದು ಭಾರತ ವಿಶ್ವದ ಕೋವಿಡ್ ಹಾಟ್ಸ್ಪಾಟ್ ಆಗಿ ಮಾರ್ಪಟ್ಟಿದೆ. ಯಾವ ರಾಷ್ಟ್ರಗಳಲ್ಲಿಯೂ ವರದಿಯಾಗದಷ್ಟು ಸಾವು-ನೋವಿಗೆ ಭಾರತ ಸಾಕ್ಷಿಯಾಗುತ್ತಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಈವರೆಗೆ ಅತೀ ಹೆಚ್ಚು ಎಂಬಂತೆ ಬರೋಬ್ಬರಿ 4,12,262 ಕೇಸ್ಗಳು ಪತ್ತೆಯಾಗಿದ್ದರೆ, 3,980 ಮಂದಿ ವೈರಸ್ನಿಂದಾಗಿ ಪ್ರಾಣಬಿಟ್ಟಿದ್ದಾರೆ. ಇವರಲ್ಲಿ ಹಲವರು ಆಸ್ಪತ್ರೆಗಳಲ್ಲಿ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೇ, ಇನ್ನೂ ಹಲವರು ಆಕ್ಸಿಜನ್ ಕೊರತೆಯಿಂದಲೇ ಮೃತಪಟ್ಟಿದ್ದಾರೆ. ದೇಶದಲ್ಲೀಗ ಕೋವಿಡ್ ಸೋಂಕಿತರ ಸಂಖ್ಯೆ 2,10,77,410ಕ್ಕೆ ಹಾಗೂ ಮೃತರ ಸಂಖ್ಯೆ 2,30,168ಕ್ಕೆ ಹೆಚ್ಚಳವಾಗಿದೆ.
35 ಲಕ್ಷ ಕೇಸ್ಗಳು ಆ್ಯಕ್ಟಿವ್
ಈವರೆಗೆ 1,72,80,844 ಮಂದಿ ಕೊರೊನಾದಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬುಧವಾರ ಒಂದೇ ದಿನ 3,29,113 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 35,66,398ಕ್ಕೆ ಏರಿಕೆಯಾಗಿದೆಯೆಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
16.25 ಕೋಟಿ ಮಂದಿಗೆ ಲಸಿಕೆ
ಆರಂಭದಲ್ಲಿ ವೇಗವಾಗಿ ದಾಖಲೆಯ ಮಟ್ಟದಲ್ಲಿ ದೇಶದಲ್ಲಿ ಲಸಿಕಾಭಿಯಾನ ನಡೆಯುತ್ತಿತ್ತು. ಆದರೆ ಈಗ ಲಸಿಕೆಯ ಅಭಾವದಿಂದಾಗಿ ವ್ಯಾಕ್ಸಿನೇಷನ್ ಪ್ರಮಾಣವೂ ಕಡಿಮೆಯಾಗಿದೆ. ಇಲ್ಲಿಯವರೆಗೆ ಒಟ್ಟು 16,25,13,339 ಮಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ.