ನವದೆಹಲಿ: ಫೆಬ್ರವರಿ ತಿಂಗಳಿನಲ್ಲಿ 20 ಸಾವಿರಕ್ಕೂ ಕಡಿಮೆ ದೈನಂದಿನ ಕೋವಿಡ್ ಕೇಸ್ ಹಾಗೂ 200ಕ್ಕೂ ಕಡಿಮೆ ಸಾವು ವರದಿಯಾಗುತ್ತಿದ್ದ ಭಾರತದಲ್ಲಿಂದು ಸರ್ಕಾರ ಮತ್ತು ಜನರ ನಿರ್ಲಕ್ಷ್ಯದ ಫಲವಾಗಿ ದಿನವೊಂದರಲ್ಲೇ ನಾಲ್ಕು ಲಕ್ಷ ಪ್ರಕರಣಗಳು, ನಾಲ್ಕು ಸಾವಿರ ಸಾವು ದಾಖಲಾಗುತ್ತಿದೆ. ವಿಶ್ವವೇ ಸಹಾಯಹಸ್ತ ಚಾಚುತ್ತಿದ್ದರೂ ಪ್ರಜೆಗಳನ್ನು ಉಳಿಸಿಕೊಳ್ಳಲು ಭಾರತವೀಗ ಹರಸಾಹಸ ಪಡುತ್ತಿದೆ. ಅನೇಕ ರಾಜ್ಯಗಳು ಸ್ವಯಂ ಲಾಕ್ಡೌನ್ ಘೋಷಿಸಿ ಸೋಂಕು ನಿಯಂತ್ರಣಕ್ಕೆ ಮುಂದಾಗಿವೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 4,03,738 ಮಂದಿಗೆ ಸೋಂಕು ಅಂಟಿದ್ದು, 4,092 ಸೋಂಕಿತರು ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 2,22,96,414 ಹಾಗೂ ಮೃತರ ಸಂಖ್ಯೆ 2,42,362ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಕೊರೊನಾ ಸಂಕಷ್ಟ... ಭಾರತದ ಇಂದಿನ ದುಃಸ್ಥಿತಿಗೆ ಮೋದಿ ಸರ್ಕಾರದ ನೀತಿಗಳೇ ಕಾರಣ: ಲ್ಯಾನ್ಸೆಟ್ ವರದಿ
ಒಟ್ಟು ಸೋಂಕಿತರ ಪೈಕಿ 1,83,17,404 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ನಿನ್ನೆ ಒಂದೇ ದಿನ 3,86,444 ಜನರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ. ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 37,36,648ಕ್ಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ವ್ಯಾಕ್ಸಿನೇಷನ್ನಲ್ಲಿ ಇಳಿಕೆ
ಆರಂಭದಲ್ಲಿ 10 ಕೋಟಿ ಮಂದಿಗೆ ತ್ವರಿತಗತಿಯಲ್ಲಿ ಕೋವಿಡ್ ಲಸಿಕೆ ನೀಡಿದ್ದ, ಇತರ ರಾಷ್ಟ್ರಗಳಿಗೂ ವ್ಯಾಕ್ಸಿನ್ ಕಳುಹಿಸಿಕೊಟ್ಟಿದ್ದ ನಮ್ಮ ದೇಶದಲ್ಲೀಗ ಲಸಿಕೆಯ ಅಭಾವದಿಂದಾಗಿ ವ್ಯಾಕ್ಸಿನೇಷನ್ ಪ್ರಮಾಣ ಕಡಿಮೆಯಾಗಿದೆ. ಜನವರಿ 16ರಿಂದ ಈವರೆಗೆ ಒಟ್ಟು 16,94,39,663 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.