ನವದೆಹಲಿ: ಭಾರತದಲ್ಲಿ ಕಳೆದ 2 ತಿಂಗಳಿಂದ ಪತ್ತೆಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ (Covid Cases) ಕಡಿಮೆಯಿದೆ. ಆದರೆ, ಸಾವಿನ ಸಂಖ್ಯೆ (Covid Deaths) ಮಾತ್ರ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ 24 ಗಂಟೆಗಳಲ್ಲಿ 11,850 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಬರೋಬ್ಬರಿ 555 ಮಂದಿ ವೈರಸ್ನಿಂದ ಅಸು ನೀಗಿದ್ದಾರೆ. ಈ ಮೂಲಕ ದೇಶದ ಒಟ್ಟು ಕೇಸ್ಗಳ ಸಂಖ್ಯೆ 3,44,26,036. ಹಾಗೂ ಮೃತರ ಸಂಖ್ಯೆ 4,63,245ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಒಂದೇ ವಾರದಲ್ಲಿ 30 ಲಕ್ಷ ಜನರಿಗೆ ಕೊರೊನಾ.. ಶುರುವಾಯ್ತು 3ನೇ ಅಲೆ ಆತಂಕ!
ಇಲ್ಲಿಯವರೆಗೆ ಶೇ.98.26 ರಷ್ಟು ಅಂದರೆ 3,38,26,483 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆ್ಯಕ್ಟಿವ್ ಕೇಸ್ಗಳ ಪ್ರಮಾಣ ಶೇ.0.40ಕ್ಕೆ ಕೆಳಗಿಳಿದಿದ್ದು, ಸದ್ಯ 1,36,308 ಕೇಸ್ಗಳು ಮಾತ್ರ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ (Ministry of Health and Family Welfare) ಮಾಹಿತಿ ನೀಡಿದೆ.
111.40 ಕೋಟಿ ಡೋಸ್ ವ್ಯಾಕ್ಸಿನೇಷನ್
ಜನವರಿ 16ರಿಂದ ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೆ 111.40 ಕೋಟಿ ಡೋಸ್ ನೀಡಲಾಗಿದೆ. ನಿನ್ನೆ ಒಂದೇ ದಿನ 58,42,530 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.