ರೋಮ್(ಇಟಲಿ): ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಭಾರತವು ಮುಂಚೂಣಿಯಲ್ಲಿದ್ದು, ಭಾರತವು ಮುಂದಿನ ವರ್ಷ 5 ಬಿಲಿಯನ್ (500 ಕೋಟಿ) ಕೋವಿಡ್ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶನಿವಾರ ರೋಮ್ನಲ್ಲಿ ನಡೆದ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತನಾಡಿದ ಅವರು ವಿಶ್ವ ಆರೋಗ್ಯ ಸಂಘಟನೆ ಭಾರತದಲ್ಲಿ ಉತ್ಪಾದನೆಯಾಗುವ ಲಸಿಕೆಗಳಿಗೆ ಆದಷ್ಟು ಶೀಘ್ರವಾಗಿ ಅನುಮತಿ ನೀಡುವುದು ಅತ್ಯಂತ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.
'ಜಾಗತಿಕ ಆರ್ಥಿಕತೆ ಮತ್ತು ಜಾಗತಿಕ ಆರೋಗ್ಯ' ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ವ್ಯಾಕ್ಸಿನ್ ಹಾಕಿಸಿಕೊಂಡಿರುವ ಪ್ರಮಾಣ ಪತ್ರ ಹೊಂದಿರುವವರಿಗೆ ಮಾತ್ರ ಇತ್ತೀಚೆಗೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಇದನ್ನು ಸಾಧಿಸುವ ಸಲುವಾಗಿ ಲಸಿಕೆಯ ಉತ್ಪಾದನೆಯೂ ಆಗಬೇಕು. ಇದರ ಜೊತೆಗೆ ಲಸಿಕೆಯನ್ನು ಪ್ರಮಾಣೀಕರಿಸುವ ವ್ಯವಸ್ಥೆಯೂ ಆತ್ಯಂತ ಶೀಘ್ರವಾಗಿ ಆಗಬೇಕೆಂದು ಅಭಿಪ್ರಾಯಪಟ್ಟರು.
ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪ್ರತಿಕ್ರಿಯೆ ನೀಡಿದ ಹರ್ಷವರ್ಧನ್ ಶ್ರಿಂಗ್ಲಾ ಯಾವುದೇ ಒಂದು ರಾಷ್ಟ್ರದಲ್ಲಿರುವ ಕಾರ್ಪೋರೇಟ್ ಸಂಸ್ಥೆಯೊಂದು ಕನಿಷ್ಠ ಶೇಕಡಾ 15ರಷ್ಟು ಕಾರ್ಪೋರೇಟ್ ತೆರಿಗೆಯನ್ನು ಪಾವತಿಸಬೇಕು ಎಂಬ ವಿಚಾರದಲ್ಲಿ ಜಿ-20 ರಾಷ್ಟ್ರಗಳ ಒಮ್ಮತವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
'ಲಸಿಕೆ ಅಸಮಾನತೆಗಳನ್ನು ಕಡಿಮೆ ಮಾಡುತ್ತದೆ'
ಭಾರತದಲ್ಲಿ ಉತ್ಪಾದನೆಯಾಗುವ ಲಸಿಕೆ ನಮ್ಮ ದೇಶದ ನಾಗರಿಕರಿಗೆ ಮಾತ್ರವಲ್ಲದೇ ಪ್ರಪಂಚದ ಉಳಿದ ಭಾಗಗಳಿಗೂ ಕೂಡಾ ಲಭ್ಯವಿರುತ್ತದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಲಸಿಕೆ ಅಸಮಾನತೆಯನ್ನು ಕಡಿಮೆ ಮಾಡಲು ಭಾರತ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
'ಒಂದು ಭೂಮಿ ಒಂದು ಆರೋಗ್ಯ'
ಲಸಿಕೆ ಸಂಶೋಧನೆ ಮತ್ತು ತಯಾರಿಕೆಗೂ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಒತ್ತು ನೀಡಿದ್ದು, 150ಕ್ಕೂ ಹೆಚ್ಚು ದೇಶಗಳಿಗೆ ಭಾರತದ ವೈದ್ಯಕೀಯ ಸಹಾಯವನ್ನು ಒದಗಿಸಿದೆ. ಕೋವಿಡ್ ಸಮಯದಲ್ಲಿ ಹಲವಾರು ರಾಷ್ಟ್ರಗಳಿಗೆ ಸಹಾಯಹಸ್ತ ಚಾಚಿದೆ ಎಂದು ಮೋದಿ ಹೇಳಿದರು.
ಕೋವಿಡ್ನಿಂದ ಪಾತಾಳಕ್ಕೆ ಇಳಿದಿದ್ದ ಆರ್ಥಿಕತೆಯ ಚೇತರಿಕೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಜಾಗತಿಕ ಸಹಕಾರ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಆರ್ಥಿಕ ಚೇತರಿಕೆ ಮತ್ತು ಸಹಕಾರ ವಿಚಾರದಲ್ಲಿ ಭಾರತ ಪಾಲುದಾರ ರಾಷ್ಟ್ರವಾಗಬೇಕು. ಅತ್ಯಂತ ಮುಖ್ಯವಾಗಿ 'ಒಂದು ಭೂಮಿ, ಒಂದು ಆರೋಗ್ಯ' ಎಂಬ ದೃಷ್ಟಿಕೋನ ಎಲ್ಲರಲ್ಲಿ ಇರಬೇಕು ಎಂದರು.
ಜಿ20 ಶೃಂಗಸಭೆಗೆ ಆಗಮಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಇಂದು ವ್ಯಾಟಿಕನ್ ನಗರಕ್ಕೆ ಆಗಮಿಸಿದ್ದು, ಕ್ರೈಸ್ತ ಧರ್ಮದ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದಾದ ನಂತರ ಸ್ಲಾಟ್ಲೆಂಡ್ನ ಗ್ಲಾಸ್ಗೋಗೆ ಭೇಟಿ ನೀಡಿ COP-26ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ನ್ಯೂಜೆರ್ಸಿಯಲ್ಲಿ ಭಾರತ ಮೂಲದ ಔಷಧ ಕಂಪನಿ ಸಿಇಒ ಬಂದೂಕುಧಾರಿಯ ಗುಂಡಿಗೆ ಬಲಿ