ನವದೆಹಲಿ: ದೇಶದ ರಫ್ತು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ 400 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಸಿಕ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇದು ದೇಶದ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದು ಜನರನ್ನು ಅಭಿನಂದಿಸಿದ ಅವರು ವಿಶ್ವದಲ್ಲಿ ಭಾರತೀಯ ಸರಕುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ಸಣ್ಣ ಉದ್ದಿಮೆದಾರರ ಯಶಸ್ಸಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದ ಸರಕುಗಳು ವಿಶ್ವದ ವಿವಿಧ ಮೂಲೆಗಳನ್ನು ಮತ್ತು ಹೊಸ ಮಾರುಕಟ್ಟೆಗಳನ್ನು ತಲುಪುತ್ತಿವೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದು, ಒಂದು ಕಾಲದಲ್ಲಿ ಭಾರತದಿಂದ ರಫ್ತು ಆಗುತ್ತಿದ್ದ ಸರಕುಗಳ ಮೌಲ್ಯ 100 ಶತಕೋಟಿ ಡಾಲರ್ ಇತ್ತು. ಆನಂತರ ಕೆಲವೊಮ್ಮೆ 150 ಶತಕೋಟಿ, ಕೆಲವೊಮ್ಮೆ 200 ಶತಕೋಟಿ ಇರುತ್ತಿತ್ತು. ಆದರೆ ಈಗ ಭಾರತವು 400 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಲಡಾಖ್‌ನ ಏಪ್ರಿಕಾಟ್, ತಮಿಳುನಾಡಿನ ಬಾಳೆಹಣ್ಣು, ಹಿಮಾಚಲದ ಧಾನ್ಯಗಳು ಮುಂತಾದ ಅನೇಕ ಹಣ್ಣುಗಳು ಮತ್ತು ತರಕಾರಿಗಳು ಜಗತ್ತನ್ನು ತಲುಪುತ್ತಿವೆ. 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳ ಪಟ್ಟಿಯು ನಮ್ಮ ರೈತರು, ತಯಾರಕರು ಮತ್ತು ಉದ್ಯಮಗಳ ಸಾಮರ್ಥ್ಯ ಮತ್ತು ಶ್ರಮದಷ್ಟೇ ದೊಡ್ಡದಾಗಿದೆ ಎಂದು ಪ್ರಧಾನಿ ಬಣ್ಣಿಸಿದ್ದು, ಈ ಹಿಂದೆ ದೊಡ್ಡ ವ್ಯಕ್ತಿಗಳು ಮಾತ್ರ ಸರ್ಕಾರಕ್ಕೆ ಉತ್ಪನ್ನಗಳನ್ನು ಮಾರಾಟ ಮಾಡಬಹುದೆಂದು ನಂಬಲಾಗಿತ್ತು. ಈಗ ಎಲ್ಲವೂ ಬದಲಾಗಿದೆ. ಇದು ನವ ಭಾರತದ ಉತ್ಸಾಹವನ್ನು ಸೂಚಿಸುತ್ತದೆ ಎಂದಿದ್ದಾರೆ.
ಬಿಜಾಪುರದ ಹಣ್ಣುಗಳು ಮತ್ತು ತರಕಾರಿಗಳಿಂದ ಹಿಡಿದು ಚಂದೋಲಿಯಿಂದ ಕಪ್ಪು ಅಕ್ಕಿಯವರೆಗೆ ನಾವು ರಫ್ತು ಮಾಡುತ್ತಿದ್ದೇವೆ. ನಮ್ಮ ರಫ್ತುಗಳನ್ನು ಡೆನ್ಮಾರ್ಕ್, ದಕ್ಷಿಣ ಕೊರಿಯಾ, ಲಂಡನ್, ಕೀನ್ಯಾದಂತಹ ರಾಷ್ಟ್ರಗಳಿಗೆ ತಲುಪಿಸಲಾಗುತ್ತಿದೆ. ಪ್ರತಿಯೊಬ್ಬ ಭಾರತೀಯರು ಸ್ಥಳೀಯ ಸರಕುಗಳನ್ನು ಜಾಗತಿಕ ಸರಕುಗಳನ್ನಾಗಿಸಲು ಶ್ರಮಿಸೋಣ. ಸ್ಥಳೀಯ ಸರಕುಗಳ ಪ್ರತಿಷ್ಠೆಯನ್ನು ಹೆಚ್ಚಿಸೋಣ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ಭಾರತವು ಮಾರ್ಚ್ 23ರಂದು, ನಿಗದಿತ ಸಮಯಕ್ಕಿಂತ ಒಂಬತ್ತು ದಿನಗಳ ಮುಂಚಿತವಾಗಿ 400 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿ, ಇತಿಹಾಸ ಸೃಷ್ಟಿಸಲಾಗಿತ್ತು. 2020-21ರ ಹಣಕಾಸು ವರ್ಷದಲ್ಲಿ ರಫ್ತು 292 ಶತಕೋಟಿ ಡಾಲರ್ ಮೌಲ್ಯದ್ದು ಆಗಿದ್ದು, 2021-22ರಲ್ಲಿ ರಫ್ತು 400 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಈ ಮೂಲಕ ರಫ್ತಿನಲ್ಲಿ ಶೇಕಡಾ 37ರಷ್ಟು ಏರಿಕೆಯಾಗಿದೆ.
ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸದೇ, ಕಾಶ್ಮೀರದಲ್ಲಿ ಶಾಂತಿ ಅಸಾಧ್ಯ : ಮೆಹಬೂಬಾ