ನವದೆಹಲಿ: ಕೊರೊನಾ ಮಹಾಮಾರಿ ವಿರುದ್ಧದ ಹೋರಾಟ ದೇಶದಲ್ಲಿ ಮುಂದುವರೆದಿದ್ದು, ಈಗಾಗಲೇ ಲಸಿಕೆ ಕೂಡ ನೀಡಲಾಗುತ್ತಿದೆ. ಇದೇ ವಿಚಾರವಾಗಿ ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದೆ.
ಭಾರತ ಕೇವಲ ಒಂದೇ ವಾರದಲ್ಲಿ 10 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ಇಷ್ಟೊಂದು ವೇಗವಾಗಿ ವ್ಯಾಕ್ಸಿನ್ ನೀಡಿರುವುದು ಭಾರತ ಮಾತ್ರ ಎಂದಿರುವ ಅವರು, ಅಮೆರಿಕ 10 ದಿನ, ಸ್ಪೇನ್ 14 ದಿನ, ಇಸ್ರೇಲ್ 18 ದಿನ, ಯುಕೆ 19 ದಿನ, ಇಟಲಿ 20 ದಿನ ಹಾಗೂ ಯುಎಇ 27 ದಿನಗಳಲ್ಲಿ ಇಷ್ಟೊಂದು ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದಿದ್ದಾರೆ.
ಎರಡು ರಾಜ್ಯಗಳಲ್ಲಿ 40 ಸಾವಿರ ಅಥವಾ ಅದಕ್ಕಿಂತಲೂ ಹೆಚ್ಚಿನ ಸಕ್ರಿಯ ಪ್ರಕರಣಗಳಿದ್ದು, 44 ಸಾವಿರ ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಹಾಗೂ 72 ಸಾವಿರ ಪ್ರಕರಣಗಳೊಂದಿಗೆ ಕೇರಳ ಮೊದಲೆರಡು ಸ್ಥಾನಗಳಲ್ಲಿವೆ ಎಂದಿದ್ದಾರೆ.
70 ದೇಶಗಳಲ್ಲಿ ರೂಪಾಂತರ ಪ್ರಕರಣಗಳಿದ್ದು, ಭಾರತದಲ್ಲಿ 164 ಕೇಸ್ ಗುರುತಿಸಿದ್ದೇವೆ. ಪ್ರಸ್ತುತವಾಗಿ ನೀಡಲಾಗುತ್ತಿರುವ ಲಸಿಕೆ ರೂಪಾಂತರಿ ವೈರಸ್ ವಿರುದ್ಧ ಕಾರ್ಯನಿರ್ವಹಿಸುತ್ತವೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ ಎಂದಿದ್ದಾರೆ. ಜತೆಗೆ ಇಲ್ಲಿಯವರೆಗೆ 25 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.