ನವದೆಹಲಿ: ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಮೂರು ಕೋಟಿ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇಂದಿನ ಕೋವಿಡ್ ವರದಿ ಪ್ರಕಾರ, ಸದ್ಯಕ್ಕೆ ದೇಶದಲ್ಲಿ 6,43,194 ಮಂದಿ ಸಕ್ರಿಯ ಸೋಂಕಿತರಿದ್ದು, ಹಿಂದಿನ 82 ದಿನಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆ.
ಕಳೆದ 24 ಗಂಟೆಯಲ್ಲಿ 50,848 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದು, ಒಂದೇ ದಿನದಲ್ಲಿ 68,817 ಮಂದಿ ಗುಣಮುಖರಾಗಿದ್ದಾರೆ. 1,358 ಮಂದಿ ಒಂದು ದಿನದಲ್ಲಿ ಕೋವಿಡ್ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: 'ಗಾಲ್ವಾನ್ ಘರ್ಷಣೆಯ ನಂತರ ಸಿದ್ಧತೆ, ತರಬೇತಿ ಅನಿವಾರ್ಯವೆಂದು ಚೀನಾ ಅರಿತುಕೊಂಡಿದೆ'
ದೇಶದಲ್ಲೀಗ ಒಟ್ಟು ಸೋಂಕಿತರ ಸಂಖ್ಯೆ 3,00,28,709ಕ್ಕೆ ಏರಿಕೆಯಾಗಿದ್ದು, ಈವರೆಗೆ 2,89,94,855 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 3,90,660 ಮಂದಿ ಮೃತಪಟ್ಟಿದ್ದು, ಸದ್ಯಕ್ಕೆ 6,43,194 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ದೇಶದಲ್ಲಿ ಕೋವಿಡ್ನಿಂದ ಗುಣಮುಖರಾಗುವವರ ಪ್ರಮಾಣ ಶೇಕಡಾ 96.56ರಷ್ಟಿದ್ದು, ಸೋಂಕು ಪರೀಕ್ಷೆ ಮಾಡಿಸಿಕೊಂಡವರಲ್ಲಿ ದಿನಕ್ಕೆ ಶೇಕಡಾ 2.67 ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸೋಂಕು ಪರೀಕ್ಷೆ ಮತ್ತು ವ್ಯಾಕ್ಸಿನೇಷನ್ ವಿವರ
ದೇಶದಲ್ಲಿ ಜೂನ್ 22ರಂದು ಸುಮಾರು 19,01,056 ಮಂದಿ ಸೋಂಕು ಪರೀಕ್ಷೆ ಮಾಡಿದ್ದು, ಈವರೆಗೆ ಒಟ್ಟು 37,59,73,198 ಮಂದಿ ಕೋವಿಡ್ ಸೋಂಕು ಪರೀಕ್ಷೆ ಮಾಡಲಾಗಿದೆ. ದೇಶದಲ್ಲಿ ಮಂಗಳವಾರ 54.24 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದ್ದು, ಸೋಮವಾರ ದಾಖಲೆಗೆ ಹೋಲಿಸಿದ್ರೆ ಭಾರಿ ಇಳಿಕೆ ಕಂಡುಬಂದಿದೆ. ಈವರೆಗೆ ದೇಶದಲ್ಲಿ 29.46 ಕೋಟಿ ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ.