ನವದೆಹಲಿ : ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 43,733 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 4,59,920 ಆಗಿದೆ. ಚೇತರಿಕೆ ಪ್ರಮಾಣ ಶೇ. 97.18 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇರಳದಲ್ಲಿ ನಿನ್ನೆ 14,373 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ತಿಂಗಳಲ್ಲಿ ದಾಖಲಾದ ಅತೀ ಹೆಚ್ಚು ಪ್ರಕರಣ ಇದಾಗಿದೆ. ಮಹಾರಾಷ್ಟ್ರದಲ್ಲಿ 8,418 ಹೊಸ ಪ್ರಕರಣಗಳು ವರದಿಯಾಗಿದ್ದು, 400 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ನಿನ್ನೆಯವರೆಗೆ (ಜುಲೈ 6) ಒಟ್ಟು 42,33,32,097 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ನಿನ್ನೆ 19,07,216 ಜನರನ್ನು ಪರೀಕ್ಷೆಗೆ ಒಳಡಪಡಿಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್) ಮಾಹಿತಿ ನೀಡಿದೆ.
ನಿನ್ನೆಗಿಂತ ಇಂದು ಹೊಸ ಪ್ರಕರಣ ಹೆಚ್ಚಳ
ನಿನ್ನೆ 34,703 ಹೊಸ ಪ್ರಕರಣಗಳು ಪತ್ತೆಯಾಗಿತ್ತು. ಸುಮಾರು 111 ದಿನಗಳ (4 ತಿಂಗಳು) ಬಳಿಕ ಅತೀ ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಆದರೆ, ಇಂದು ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.