ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 6,984 ಮಂದಿ ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,47,10,628 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ಸದ್ಯಕ್ಕೆ ಒಟ್ಟು 87,562 ಸಕ್ರಿಯ ಪ್ರಕರಣಗಳಿವೆ. ಜೊತೆಗೆ ನಿನ್ನೆ 247 ಮಂದಿ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 4,76,135 ಕ್ಕೆ ಏರಿಕೆಯಾಗಿದೆ.
ಕಳೆದ 46 ದಿನಗಳಿಂದ ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು 15,000 ಕ್ಕಿಂತ ಕಡಿಮೆ ಕಂಡುಬರುತ್ತಿವೆ. ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 174 ಮಂದಿ ಸೋಂಕಿತರು ಸಾವನ್ನಪ್ಪಿರುವ ಕುರಿತು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 24 ಮಂದಿ ಮರಣ ಹೊಂದಿದ್ದಾರೆ.
ಕಳೆದ 24 ಗಂಟೆಗಳಲ್ಲಿ 8,168 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದು, ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 98.38 ಇದೆ. ಈವರೆಗೆ ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 3,41,46,931 ಕ್ಕೆ ಏರಿಕೆಯಾಗಿದೆ. ದೈನಂದಿನ ಕೋವಿಡ್ ಪಾಸಿಟಿವಿಟಿ ದರವು ಶೇಕಡಾ 0.59 ರಷ್ಟಿದೆ.
ಜನವರಿ 16 ರಿಂದ ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 134.61 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್ ನೀಡಲಾಗಿದೆ.
ಓಮಿಕ್ರಾನ್ ಪ್ರಕರಣಗಳು:
ದೇಶದಲ್ಲಿ ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಆತಂಕ ಮೂಡಿಸಿದೆ. ಈಗಾಗಲೇ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಕರ್ನಾಟಕ, ಕೇರಳ, ನವದೆಹಲಿ, ಆಂಧ್ರಪ್ರದೇಶ, ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಇಂದು ತೆಲಂಗಾಣದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.