ನವದೆಹಲಿ: ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ತಮ್ಮ ಸೇನೆಯನ್ನು ವಾಪಸ್ ಕರೆಯಿಸಿಕೊಂಡಿರುವ ಭಾರತ ಹಾಗೂ ಚೀನಾ ನಾಳೆ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಿವೆ.
ಚೀನಾದ ಕಡೆಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ನಾಳೆ ಬೆಳಗ್ಗೆ 10 ಗಂಟೆಗೆ ಮಾತುಕತೆ ನಡೆಯಲಿದ್ದು, ಪ್ಯಾಂಗಾಂಗ್ ಸರೋವರದಿಂದ ಸೇನೆಗಳು ಹಿಂದಕ್ಕೆ ಸರಿದಿರುವ ಕುರಿತು ಉಭಯ ರಾಷ್ಟ್ರಗಳು ಚರ್ಚಿಸಲಿವೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗಾಲ್ವಾನ್ ಕಣಿವೆ ಸಂಘರ್ಷ: ಅಂದು ತನ್ನ 4 ಯೋಧರು ಹುತಾತ್ಮರಾಗಿದ್ದನ್ನ ಒಪ್ಪಿದ ಚೀನಾ
ಕಳೆದ ವಾರ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದೊಂದಿಗಿನ ನಮ್ಮ ನಿರಂತರ ಮಾತುಕತೆಗಳು ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಹಾಗೂ ಭಾರತೀಯ ಸೇನೆ ಹಿಂದೆ ಸರಿಯುವ ಒಪ್ಪಂದ ಮಾಡಿಕೊಳ್ಳಲು ಕಾರಣವಾಗಿವೆ ಎಂದು ಹೇಳಿದ್ದರು. ಇದಕ್ಕೆ ಪೂರಕವಾದ ಫೋಟೋ ಮತ್ತು ವಿಡಿಯೋಗಳನ್ನ ಭಾರತೀಯ ಸೇನೆ ಬಿಡುಗಡೆ ಮಾಡಿತ್ತು.
ಭಾರತ - ಚೀನಾ ನಡುವೆ ಈಗಾಗಲೇ 9 ಬಾರಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ. ಇದಕ್ಕೂ ಮೊದಲು 2020ರ ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2, ಸೆಪ್ಟೆಂಬರ್ 21, ಅಕ್ಟೋಬರ್ 12, ನವೆಂಬರ್ 6 ಹಾಗೂ 2021ರ ಜನವರಿ 24ರಂದು ಸಭೆಗಳು ನಡೆದಿದ್ದವು.