ನವದೆಹಲಿ: ಭಾರತಕ್ಕೆ 2022ರ ವರ್ಷವು ಸ್ಪೂರ್ತಿದಾಯಕ ಮತ್ತು ಅದ್ಭುತವಾಗಿದೆ. ಈ ವರ್ಷದ ಅವಧಿಯಲ್ಲಿ ದೇಶವು ಮಾಡಿದ ಅನೇಕ ಸಾಧನೆಗಳಿಂದಾಗಿ ವಿಶ್ವದಲ್ಲೇ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಸ್ತುತ ವರ್ಷದ ಕೊನೆಯ 'ಮನ್ ಕಿ ಬಾತ್'ನಲ್ಲಿ ಮಾತನಾಡಿದ ಪ್ರಧಾನಿ, ಟಾಟಾ ಸ್ಮಾರಕ ಕೇಂದ್ರದ ಸಂಶೋಧನೆಯನ್ನು ಉಲ್ಲೇಖಿಸಿ, ದೇಶದ ಸಾಂಪ್ರದಾಯಿಕ ವಿಧಾನಗಳಾದ ಯೋಗ ಮತ್ತು ಆಯುರ್ವೇದವು ಈಗ ಆಧುನಿಕ ಯುಗದ ಸಾಕ್ಷ್ಯಾಧಾರಿತ ಔಷಧಗೆ ಸಾಕ್ಷಿಯ ಸ್ಪರ್ಶಗಲ್ಲು ಆಗಿದೆ ಎಂದು ಪ್ರತಿಪಾದಿಸಿದರು.
ಟಾಟಾ ಸ್ಮಾರಕ ಕೇಂದ್ರವು ನಡೆಸಿದ ಆಳವಾದ ಸಂಶೋಧನೆಯು ಸ್ತನ ಕ್ಯಾನ್ಸರ್ ರೋಗಿಗಳಿಗೆ ಯೋಗವು ತುಂಬಾ ಪರಿಣಾಮಕಾರಿಯಾಗಿದೆ ಎಂದು ಬಹಿರಂಗಪಡಿಸಿದೆ. ಈ ಕುರಿತ ನಡೆದ ಮೊದಲ ಅಧ್ಯಯನವಾಗಿದೆ. ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ ಸ್ತನ ಕ್ಯಾನ್ಸರ್ ಸಮ್ಮೇಳನದಲ್ಲಿ ಇದನ್ನು ಪ್ರಸ್ತುತಪಡಿಸಲಾಗಿತ್ತು. ಅದರ ಫಲಿತಾಂಶಗಳು ಸಹ ಅಂತಾರಾಷ್ಟ್ರೀಯ ತಜ್ಞರ ಗಮನವನ್ನು ಸೆಳೆದಿವೆ ಎಂದೂ ಹೇಳಿದರು.
2022ರಲ್ಲಿ ದೇಶದ ಸಾಧನೆಗಳನ್ನು ಶ್ಲಾಘಿಸಿದ ಮೋದಿ, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಮಾನವನ್ನು ಪಡೆದುಕೊಂಡಿದೆ. ಅಂಕಿ ಅಂಶವನ್ನು ಮೀರಿ 220 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳ ದಾಖಲೆ ಸಾಧಿಸಿದೆ. ಅಲ್ಲದೇ, 400 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡಿದೆ ಎಂದು ತಿಳಿಸಿದರು.
ದೇಶವು ಸ್ವಾವಲಂಬಿ ಭಾರತ ಎಂಬ ಸಂಕಲ್ಪವನ್ನು ಅಳವಡಿಸಿಕೊಂಡಿದ್ದು, ಅದರಂತೆ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಆಗಿದೆ. ಈ ವರ್ಷ ಬಾಹ್ಯಾಕಾಶ, ಡ್ರೋನ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲೂ ಭಾರತವು ತನ್ನ ವೈಭವವನ್ನು ಸ್ಥಾಪಿಸಿದೆ ಎಂದು ಪ್ರಧಾನಿ ಬಣ್ಣಿಸಿದರು.
2022ರಲ್ಲಿ ದೇಶದ ಜನರ ಶಕ್ತಿ, ಅವರ ಸಹಕಾರ, ಅವರ ಸಂಕಲ್ಪ, ಅವರ ಅಗಾಧ ಯಶಸ್ಸು ತುಂಬಾ ದೊಡ್ಡದಾಗಿದೆ. ಇದೆಲ್ಲವನ್ನೂ ಮನ್ ಕಿ ಬಾತ್‌ನಲ್ಲಿ ಒಂದೇ ಸಾರಿ ಹೇಳುವುದು ಕಷ್ಟಕರವಾಗಿದೆ ಎಂದ ಮೋದಿ, 2022ರ ವರ್ಷವು ನಿಜಕ್ಕೂ ಅನೇಕ ರೀತಿಯಲ್ಲಿ ಸ್ಪೂರ್ತಿದಾಯಕ ಮತ್ತು ಅದ್ಭುತವಾಗಿದೆ ಎಂದು ವಿವರಿಸಿದರು.
ದೇಶಕ್ಕೆ ಹೊಸ ಗತಿ: ಭಾರತವು ತನ್ನ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಇದೇ ವರ್ಷದಲ್ಲಿ ಪೂರ್ಣಗೊಳಿಸಿತು. ಇದೇ ವರ್ಷ ಅಮೃತ್ ಕಾಲ ಸಹ ಪ್ರಾರಂಭವಾಯಿತು. ಈ ವರ್ಷ ದೇಶವು ಹೊಸ ಗತಿಯನ್ನು ಪಡೆದುಕೊಂಡಿದೆ. ಕ್ರೀಡಾ ಕ್ಷೇತ್ರದಲ್ಲಿಯೂ ಸಹ ಭಾರತ ಸಾಧನೆ ಮಾಡಿದೆ. ಅದು ಕಾಮನ್‌ವೆಲ್ತ್ ಗೇಮ್ಸ್ ಆಗಿರಲಿ ಅಥವಾ ನಮ್ಮ ಮಹಿಳಾ ಹಾಕಿ ತಂಡದ ಪ್ರದರ್ಶನವಾಗಲಿ, ನಮ್ಮ ಯುವಜನರು ಅದ್ಭುತ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜೊತೆಗೆ ಏಕ್ ಭಾರತ್ - ಶ್ರೇಷ್ಠ್ ಭಾರತ್ ಸ್ಫೂರ್ತಿಯನ್ನು ವಿಸ್ತರಿಸುವ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಗುಜರಾತ್‌ನ ಮಾಧವಪುರ ಮೇಳ ಮತ್ತು ವಾರಣಾಸಿಯ ಕಾಶಿ-ತಮಿಳು ಸಂಗಮ ಆಗಿರಬಹುದು. ಆಗಸ್ಟ್ ತಿಂಗಳಲ್ಲಿ ಆಯೋಜಿಸಿದ್ದ ‘ಹರ್ ಘರ್ ತಿರಂಗ’ ಅಭಿಯಾನವನ್ನು ಯಾರು ಮರೆಯಲು ಸಾಧ್ಯ ಎಂದ ಅವರು, ಆರು ಕೋಟಿಗೂ ಅಧಿಕ ಮಂದಿ ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಹೇಳಿದರು.
ಭಾರತವು ಜಿ-20 ಶೃಂಗದ ಅಧ್ಯಕ್ಷ ಸ್ಥಾನವನ್ನು ಪಡೆದಿರುವುದರಿಂದ ದೇಶದ ಉತ್ಸಾಹವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. 2023ರಲ್ಲಿ ಇದನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ, ಕ್ರಿಸ್‌ಮಸ್ ಮತ್ತು ಮುಂಬರುವ ಹೊಸ ವರ್ಷಕ್ಕೆ ಜನರಿಗೆ ಶುಭಾಶಯ ಕೋರಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ವಾಜಪೇಯಿ ದೇಶಕ್ಕೆ ಅಸಾಧಾರಣ ನಾಯಕತ್ವವನ್ನು ನೀಡಿದ ಮಹಾನ್ ರಾಜಕಾರಣಿ ಎಂದು ಬಣ್ಣಿಸಿದರು.
ಇದನ್ನೂ ಓದಿ: ಕೊರೊನಾ ಬಗ್ಗೆ ಎಚ್ಚರ: ಕೊನೆಯ ಮನ್ ಕಿ ಬಾತ್‌ನಲ್ಲಿ ಜನರಿಗೆ ಪ್ರಧಾನಿ ಮೋದಿ ಕಿವಿಮಾತು