ಭೋಪಾಲ್ (ಮಧ್ಯಪ್ರದೇಶ): ಮುಂಬರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಭೋಪಾಲ್‌ನಲ್ಲಿ ನಡೆಸಲು ಉದ್ದೇಶಿಸಿದ್ದ I.N.D.I.A ಮೈತ್ರಿಕೂಟದ ಮೊದಲ ಜಂಟಿ ರ್ಯಾಲಿಯು ನಿರ್ಧರಿಸಿದ ಮೂರೇ ದಿನದಲ್ಲಿ ಮುಂದೂಡಿಕೆಯಾಗಿದೆ. ಸೆಪ್ಟೆಂಬರ್ 16 ರಂದು ಎನ್ಸಿಪಿ ನಾಯಕ ಶರದ್ ಪವಾರ್ ಅವರ ದೆಹಲಿ ನಿವಾಸದಲ್ಲಿ ನಡೆದ ಕೂಟದ ಸಮನ್ವಯ ಸಭೆಯಲ್ಲಿ ಸಾರ್ವಜನಿಕ ಸಭೆ ನಡೆಸಲು ಉದ್ದೇಶಿಸಲಾಗಿತ್ತು.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಅವರು, ಭೋಪಾಲ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಐಎನ್ಡಿಐಎ ಕೂಟದ ಮೊದಲ ಸಾರ್ವಜನಿಕ ರ್ಯಾಲಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಮೊನ್ನೆ ನಡೆದ ಸಮನ್ವಯ ಸಭೆಯಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ಸಮ್ಮಿಶ್ರ ರ್ಯಾಲಿ ನಡೆಸಲು ಉದ್ದೇಶಿಸಲಾಗಿತ್ತು. ಕಾರಣಾಂತರಗಳಿಂದ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಮಧ್ಯಪ್ರದೇಶ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಾತನಾಡಿ, ರ್ಯಾಲಿ ಆಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ಉದ್ದೇಶಿತ ರ್ಯಾಲಿಯ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ, ಭೋಪಾಲ್‌ನಲ್ಲಿ ನಡೆಸಲು ನಿರ್ಧರಿಸಿದ್ದ ರ್ಯಾಲಿಯು ಮುಂದೂಡಲಾಗಿದೆ ಎಂದು ಹೇಳಿದರು.
ಶೀಘ್ರವೇ ಮತ್ತೊಂದು ದಿನಾಂಕ: ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್, ಭೋಪಾಲ್‌ನಲ್ಲಿ ಇಂಡಿಯಾ ಕೂಟದ ಮೊದಲ ಉದ್ದೇಶಿತ ರ್ಯಾಲಿಯನ್ನು ರದ್ದುಗೊಳಿಸಲಾಗಿಲ್ಲ. ಅಕ್ಟೋಬರ್ನಲ್ಲಿ ನಡೆಸಲು ನಿರ್ಧರಿಸಿದ್ದ ಸಭೆಗೆ ಮತ್ತೊಂದು ದಿನಾಂಕವನ್ನು ಹೊಂದಿಸಲಾಗುತ್ತಿದೆ. ಶೀಘ್ರದಲ್ಲೇ ಬೇರೆ ದಿನ ನಿಗದಿ ಮಾಡಲಾಗುವುದು ಎಂದಿದ್ದಾರೆ.
ಕಾಂಗ್ರೆಸ್, ಆಪ್ನಿಂದಲೇ ಹಿಂದೇಟು: ಭೋಪಾಲ್‌ನಲ್ಲಿ ಉದ್ದೇಶಿಸಲಾದ ಇಂಡಿಯಾ ಕೂಟದ ರ್ಯಾಲಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್ ಅವರೇ ಸಿದ್ಧರಿಲ್ಲ ಎಂದು ತಿಳಿದುಬಂದಿದೆ. ಇದರ ಜೊತೆಗೆ ಆಮ್ ಆದ್ಮಿ ಪಕ್ಷವೂ (ಎಎಪಿ) ರ್ಯಾಲಿ ನಡೆಸುವ ಪರವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ವಿಧಾನಸಭೆ ಚುನಾವಣೆ ನಡೆಯಲಿರುವ ಐದೂ ರಾಜ್ಯಗಳಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ರ್ಯಾಲಿ ನಡೆಯುವುದಿಲ್ಲ ಎಂದು ವರದಿಯಾಗಿದೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಅಕ್ಟೋಬರ್ 5 ರಂದು ಮಧ್ಯಪ್ರದೇಶದಲ್ಲಿ ಚುನಾವಣಾ ಸಂಬಂಧಿತ ಸಭೆಯನ್ನು ನಡೆಸಲಿದ್ದಾರೆ. ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಸೆಪ್ಟೆಂಬರ್ 19 ರಿಂದ ರಾಜ್ಯಾದ್ಯಂತ ಜನ ಆಕ್ರೋಶ ಯಾತ್ರೆ ನಡೆಸುತ್ತಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಕೂಟದ ಸಭೆ ನಡೆಸಲು ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.
ಬಿಜೆಪಿ ವ್ಯಂಗ್ಯ: ಭೋಪಾಲ್‌ನಲ್ಲಿ ಇಂಡಿಯಾ ಬಣದ ಉದ್ದೇಶಿತ ರ‍್ಯಾಲಿ ಮುಂದೂಡಿದ್ದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ. ವಿರೋಧ ಪಕ್ಷಗಳ ನಾಯಕರು ಸನಾತನ ಧರ್ಮವನ್ನು ಅವಮಾನಿಸಿರುವುದರಿಂದ ಜನರಲ್ಲಿ ಕೋಪವಿದೆ. ಜನರು ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ಸಹಿಸುವುದಿಲ್ಲ. ಆ ಸಿಟ್ಟು ಸಭೆಯಲ್ಲಿ ಕಾಣಬಹುದು ಎಂಬ ಕಾರಣಕ್ಕಾಗಿ ರ್ಯಾಲಿಯನ್ನೇ ರದ್ದುಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕುಟುಕಿದ್ದಾರೆ.
ಇದನ್ನೂ ಓದಿ: ಇಂಡಿಯಾ ಕೂಟದ ಸಮನ್ವಯ ಸಮಿತಿ ಸಭೆ ಮುಕ್ತಾಯ: ಭೋಪಾಲ್‌ನಲ್ಲಿ ಸಾರ್ವಜನಿಕ ಸಭೆ, ಶೀಘ್ರವೇ ಸೀಟು ಹಂಚಿಕೆ ಬಗ್ಗೆ ನಿರ್ಧಾರ