ನವದೆಹಲಿ: ಇಂಡೋ-ಪೆಸಿಫಿಕ್‌ನಲ್ಲಿ ಜಲಗಡಿ ಭದ್ರತೆ, ಅಫ್ಘಾನಿಸ್ತಾನದಲ್ಲಿನ ಸದ್ಯದ ಪರಿಸ್ಥಿತಿ ಸೇರಿ ಬಹುಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಆಸ್ಟ್ರೇಲಿಯಾದ ನಿಯೋಗದೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಭಾರತ - ಆಸ್ಟ್ರೇಲಿಯಾ 2+2 ಸಚಿವರ ಸಭೆ ನಂತರ ಮಾತನಾಡಿದ ಅವರು, ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಮರೀಸ್ ಪೇನ್, ರಕ್ಷಣಾ ಸಚಿವ ಪೀಟರ್ ಡಟನ್ ಅವರೊಂದಿಗೆ ಸಮಗ್ರ ಚರ್ಚೆಗಳನ್ನು ನಡೆಸಿದ್ದೇವೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ರಕ್ಷಣಾ ಸಹಕಾರ ಮತ್ತು ಸಹಕಾರಕ್ಕಾಗಿ ನಾವು ವಿವಿಧ ಸಾಂಸ್ಥಿಕ ಚೌಕಟ್ಟುಗಳ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದಾರೆ.
ಇಂಡೋ - ಪೆಸಿಫಿಕ್‌ನಲ್ಲಿನ ಸಮುದ್ರ ಭದ್ರತೆ, ಅಫ್ಘಾನಿಸ್ತಾನದ ಸ್ಥಿತಿ ಹಾಗೂ ಬಹುಪಕ್ಷೀಯ ಸಹಕಾರ ಮತ್ತು ಇತರ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಭಾರತ ಮತ್ತು ಆಸ್ಟ್ರೇಲಿಯಾವು ಪ್ರಮುಖ ಪಾಲುದಾರಿಕೆಯ ರಾಷ್ಟ್ರಗಳಾಗಿದ್ದು, ಮುಕ್ತ, ಅಂತರ್ಗತ ಹಾಗೂ ಸಮೃದ್ಧವಾದ ಇಂಡೋ-ಪೆಸಿಫಿಕ್ ಪ್ರದೇಶದ ದೃಷ್ಟಿಕೋನವನ್ನು ಆಧರಿಸಿದೆ. ಇಡೀ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಗೊಳಿಸುವುದು ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ಸಾಮಾನ್ಯ ಆಸಕ್ತಿ ಆಗಿದೆ ಎಂದರು.
ಭಾರತ-ಆಸ್ಟ್ರೇಲಿಯಾ 2+2 ರಾಷ್ಟ್ರಗಳ ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳ ನಡುವಿನ ನಿಯೋಗ ಮಟ್ಟದ ಮಾತುಕತೆ ಇದಾಗಿದ್ದು, ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆಯ ವಿಷಯವಾಗಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಮರೀಸ್ ಪೇನ್, ರಕ್ಷಣಾ ಸಚಿವ ಪೀಟರ್ ಡಟನ್ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಅಫ್ಘಾನ್ ಪರಿಸ್ಥಿತಿ ಎದುರಿಸಲು ಭಾರತ ಶಕ್ತಿಯುತವಾಗಿದೆ: ರಾಜನಾಥ್ ಸಿಂಗ್