ನವದೆಹಲಿ: ಅತ್ಯಧಿಕ ಕೋವಿಡ್ ಪ್ರಕರಣಗಳು ವರದಿಯಾಗಿರುವ ದೇಶಗಳಿಂದ ಒಳಬರುವ ವಿಮಾನಗಳನ್ನು ತಡೆಯುವಂತೆ ಕೇಂದ್ರ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಚೀನಾದಿಂದ ಒಳಬರುವ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ತಕ್ಷಣವೇ ನಿಲ್ಲಿಸುವಂತೆ ವಿರೋಧ ಪಕ್ಷಗಳ ಬೇಡಿಕೆಯ ಮಧ್ಯೆ ಕೇಂದ್ರ ಸ್ಪಷ್ಟನೆ ನೀಡಿದೆ.
'ನಾವು ನೇರವಾಗಿ ಚೀನಾದಿಂದ ಭಾರತಕ್ಕೆ ಬರುವ ಅಥವಾ ಭಾರತದಿಂದ ಚೀನಾಕ್ಕೆ ಹೋಗುವ ಯಾವುದೇ ವಿಮಾನಗಳನ್ನು ಹೊಂದಿಲ್ಲ. ಆದರೆ ಚೀನಾದ ಮೂಲಕ ಭಾರತಕ್ಕೆ ಆಗಮಿಸುವ ಸಂಪರ್ಕ ವಿಮಾನಗಳನ್ನು ನಿಲ್ಲಿಸುವ ಯಾವುದೇ ಆದೇಶವನ್ನು ನೀಡಲಾಗಿಲ್ಲ. ಇಂಥ ಯಾವುದೇ ನಿರ್ಧಾರವನ್ನು ಜಾರಿಗೊಳಿಸುವ ಅಧಿಕಾರ ನಾಗರಿಕ ವಿಮಾನಯಾನ ಸಚಿವಾಲಯಕ್ಕಿದ್ದು, ಅಂತಿಮ ನಿರ್ಧಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ತೆಗೆದುಕೊಳ್ಳುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಮತ್ತು ಅದಕ್ಕೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಳೆದ ಆರು ತಿಂಗಳಲ್ಲಿ, ಭಾರತದಲ್ಲಿ BF.7 Omicron ಉಪ-ವೇರಿಯಂಟ್‌ನ ನಾಲ್ಕು ಪ್ರಕರಣಗಳು ವರದಿಯಾಗಿವೆ. ಇದೇ ತಳಿಯ ವೈರಸ್ನಿಂದ ಪ್ರಸ್ತುತ ಚೀನಾದಲ್ಲಿ ವ್ಯಾಪಕವಾಗಿ ಸೋಂಕು ಹರಡುತ್ತಿದೆ.
ಈ ವಿಷಯದ ಬಗ್ಗೆ ತಿಳಿದಿರುವ ಜನರ ಪ್ರಕಾರ, ಪ್ರಸ್ತುತ ದೇಶದಲ್ಲಿ ಕೋವಿಡ್-19 ನ 10 ವಿಭಿನ್ನ ರೂಪಾಂತರಗಳಿವೆ. ಅದರಲ್ಲಿ BF.7 ಇತ್ತೀಚಿನ ರೂಪಾಂತರವಾಗಿದೆ.
ಚೀನಾದಲ್ಲಿ ಗಂಭೀರವಾಗಿರುವ ಕೋವಿಡ್-19 ಪರಿಸ್ಥಿತಿಯನ್ನು ಗಮನಿಸಿದರೆ, ಸರ್ಕಾರ ತಕ್ಷಣವೇ ಚೀನಾದಿಂದ ಬರುವ ಎಲ್ಲಾ ವಿಮಾನಗಳನ್ನು ನಿಷೇಧಿಸಬೇಕು. ಯುಎಸ್, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಕೋವಿಡ್ ಹೆಚ್ಚಳ ಮತ್ತು ಹೊಸ ಮಾರಣಾಂತಿಕ ರೂಪಾಂತರದ ಹೊರಹೊಮ್ಮುವಿಕೆಯ ಸಾಧ್ಯತೆಯನ್ನು ಗಮನಿಸಿದರೆ, ಭಾರತವು ಕೋವಿಡ್-19 ಮಾರ್ಗಸೂಚಿಗಳನ್ನು ಮರುಸ್ಥಾಪಿಸುವ ಬಗ್ಗೆ ಯೋಚಿಸಬೇಕು ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಇನ್ನೂ ಮುಗಿದಿಲ್ಲ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಅಗತ್ಯವೆಂದ ಕೇಂದ್ರ