ನವದೆಹಲಿ: ಸಿವಿಲ್ ಗುತ್ತಿಗೆ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ ತೊಡಗಿರುವ ಉತ್ತರ ಪ್ರದೇಶದ ಝಾನ್ಸಿ ಮೂಲದ ಬಿಸಿನೆಸ್ ಗ್ರೂಪ್ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿದೆ.
ಆಗಸ್ಟ್ 3 ರಂದು ಪ್ರಾರಂಭವಾದ ಶೋಧ ಕಾರ್ಯಾಚರಣೆಯು ಝಾನ್ಸಿ, ದೆಹಲಿ, ಲಖನೌ, ಕಾನ್ಪುರ ಮತ್ತು ಗೋವಾ ಸೇರಿದಂತೆ ಸುಮಾರು 30 ಕಡೆ ದಾಳಿ ಮಾಡಲಾಗಿದೆ. ಈ ವೇಳೆ, ಲೆಕ್ಕಕ್ಕೆ ಸಿಗದಷ್ಟು ನಗದು, 15 ಕೋಟಿ ರೂಪಾಯಿಗೂ ಅಧಿಕ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವ್ಯಾಪಾರ ಗುಂಪುಗಳಿಂದ ಆಪಾದಿತ ತೆರಿಗೆ ವಂಚನೆಯ ಬಗ್ಗೆ ನಿಖರ ಮಾಹಿತಿ ಪಡೆದ ನಂತರ, ಆದಾಯ ತೆರಿಗೆ ಇಲಾಖೆಯು ಶೋಧ ಕಾರ್ಯಾಚರಣೆಗಾಗಿ ರಾಜ್ಯಾದ್ಯಂತ ದಾಳಿ ನಡೆಸಿದೆ. ಶೋಧ ಕಾರ್ಯಾಚರಣೆ ವೇಳೆ ಕೆಲ ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಡೇಟಾ ರೂಪದಲ್ಲಿರುವ ಪುರಾವೆಗಳು ಕಂಡು ಬಂದಿವೆ. ಅವುಗಳೆಲ್ಲವನ್ನು ಐಟಿ ವಶಕ್ಕೆ ಪಡೆದುಕೊಂಡಿದೆ. ದಾಳಿ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳ ತನಿಖೆಯಿಂದ ಸುಮಾರು 150 ಕೋಟಿ ರೂ.ಗೂ ಅಧಿಕ ಮೊತ್ತದ ಲೆಕ್ಕಕ್ಕೆ ಸಿಗದ ರಸೀದಿಗಳ ಪ್ರಮಾಣ ಪತ್ತೆಯಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.
ಇನ್ನು ಮೊನ್ನೆಯಷ್ಟೇ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಉಕ್ಕು, ಬಟ್ಟೆ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ನಡೆಸುತ್ತಿರುವ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗಿತ್ತು. ಆಗಸ್ಟ್ 1 ರಿಂದ 8 ರವರೆಗೆ 58 ಕೋಟಿ ನಗದು, 32 ಕಿಲೋ ಚಿನ್ನಾಭರಣಗಳು, 16 ಕೋಟಿ ಮೌಲ್ಯದ ವಜ್ರಗಳು, ರತ್ನಗಳು ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ದೇಶದ ವಿವಿಧೆಡೆ ಐಟಿ ದಾಳಿ: ಸಾವಿರ ಕೋಟಿಗೂ ಹೆಚ್ಚು ಕಡೆ ಅಕ್ರಮ ವ್ಯವಹಾರ ಬಯಲು