ಲಖನೌ: ಆದಾಯ ತೆರಿಗೆ ಇಲಾಖೆಯು ಉತ್ತರ ಪ್ರದೇಶದ ಮಾಂಸ ಉತ್ಪಾದನೆ ಮತ್ತು ರಫ್ತು ಮಾಡುವ ಕಂಪನಿಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಟ್ಟು 1,200 ಕೋಟಿ ರೂಪಾಯಿ ಮೌಲ್ಯದ ಕಪ್ಪುಹಣ ಪತ್ತೆಯಾಗಿದೆ.
ಐಟಿ ಅಧಿಕಾರಿಗಳು ಒಟ್ಟು ನಾಲ್ಕು ದಿನಗಳ ಕಾಲ ಲಕ್ನೋ ಮತ್ತು ಉನ್ನಾವೊದ ಮಾಂಸ ಉತ್ಪಾದಿಸುವ ಮತ್ತು ರಫ್ತು ಮಾಡುವ ಕಂಪನಿಗಳ ಮೇಲೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ರೆಹಮಾನ್ ಗ್ರೂಪ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ದೊಡ್ಡ ಪ್ರಮಾಣದ ಕಪ್ಪುಹಣ ಕಂಡುಬಂದಿದೆ. ಕೇವಲ ರೆಹಮಾನ್ ಗ್ರೂಪ್ ಪ್ರೈವೇಟ್ ಲಿಮಿಟೆಡ್ ಕಚೇರಿಯಲ್ಲಿಯೇ ಒಟ್ಟು 60 ಕೋಟಿ ರೂಪಾಯಿ ಕಪ್ಪು ಹಣ ಸಿಕ್ಕಿಬಿದ್ದಿದ್ದು, ಇದರಲ್ಲಿ 60 ಲಕ್ಷ ರೂಪಾಯಿ ನಗದು, 60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೊರೆತಿವೆ.
ತನಿಖೆಯ ಸಂದರ್ಭ ರೆಹಮಾನ್ ಗ್ರೂಪ್‌ನ ಲೆಡ್ಜರ್ ಪುಸ್ತಕದಲ್ಲಿ ತೆರಿಗೆ ವಂಚನೆ ಸಂಬಂಧಿತ ಅಕ್ರಮಗಳು ಸಿಕ್ಕಿವೆ. ಈ ಕಂಪನಿಯು ಯುರೋಪಿಯನ್ ಮತ್ತು ಆಫ್ರಿಕನ್ ದೇಶಗಳಲ್ಲಿ 110 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಹೊಂದಿದೆ. ಆದರೆ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂದು ಕೆಲವು ಮಾಹಿತಿ ಮೂಲಗಳು ತಿಳಿಸಿವೆ.
ಈ ಕಂಪೆನಿಗಳಲ್ಲದೆ ರುಸ್ತಂ ಫುಡ್ಸ್ ಪ್ರೈವೇಟ್ ಲಿಮಿಟೆಡ್, ಬರೇಲಿಯ ಅಲ್ ಸುಮಾಮಾ ಅಗ್ರೋ ಫುಡ್ಸ್ ಪ್ರೈವೇಟ್ ಲಿಮಿಟೆಡ್, ಬರೇಲಿಯ ರಹಬರ್ ಫುಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮರಿಯಾ ಫ್ರೋಜನ್ ಆಗ್ರೋ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ಗಳು ತೆರಿಗೆ ವಂಚಿಸಿದೆಯೇ ಇಲ್ಲವೆ ಎಂಬುದನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆಗಳ ತಂಡ ತನಿಖೆ ನಡೆಸುತ್ತಿವೆ.
ಇದನ್ನೂ ಓದಿ: ಮಲೇಷಿಯಾದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಐಐಟಿ ಖರಗ್ಪುರ್ ಚಿಂತನೆ