ನವದೆಹಲಿ: ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಪ್ ನಾಯಕರಾದ ಕೈಲಾಶ್ ಗೆಹ್ಲೋಟ್ ಮತ್ತು ಸತ್ಯೇಂದ್ರ ಜೈನ್ ವಿರುದ್ಧ ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಹೊಸ ದೂರು ಸಲ್ಲಿಸಿದ್ದೇನೆ ಎಂದು ಹೇಳಿರುವ ಸುಕೇಶ್, ಬಹಿರಂಗ ಪತ್ರವೊಂದನ್ನೂ ಬರೆದಿದ್ದಾರೆ.
ತಮ್ಮ ಪತ್ರದ ಮೂಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಕೇಶ್ ಚಂದ್ರಶೇಖರ್ ಸರಣಿ ಪ್ರಶ್ನೆಗಳನ್ನು ಮಾಡಿದ್ದು, ನಾನು ದೇಶದ ಅತಿ ದೊಡ್ಡ ದರೋಡೆಕೋರನಾಗಿದ್ದರೆ, ಯಾವ ಆಧಾರದಲ್ಲಿ ನನ್ನಿಂದ 50 ಕೋಟಿ ರೂಪಾಯಿ ಸ್ವೀಕರಿಸಿ, ನನಗೆ ರಾಜ್ಯಸಭಾ ಸ್ಥಾನದ ಆಫರ್ ನೀಡಿದ್ದೀರಿ ಎಂದು ಕೇಳಿದ್ದಾರೆ.
ಕರ್ನಾಟಕ, ಭಾಸ್ಕರ್ ರಾವ್ ಬಗ್ಗೆ ಪ್ರಸ್ತಾವ: 2016ರಲ್ಲಿ ಕೇಜ್ರಿವಾಲ್ ಅವರು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆಪ್ನ ಹುದ್ದೆಗಳು ಮತ್ತು ಪೋಸ್ಟಿಂಗ್‌ಗಳಿಗೆ ಪ್ರತಿಯಾಗಿ ಪಕ್ಷಕ್ಕೆ 500 ಕೋಟಿ ರೂಪಾಯಿಗಳನ್ನು ವಂತಿಗೆ ಕೊಡುವ ಇನ್ನೂ 20 ರಿಂದ 30 ವ್ಯಕ್ತಿಗಳನ್ನು ಕರೆತರಲು ನೀವು ನನ್ನನ್ನು ಏಕೆ ಒತ್ತಾಯಿಸಿದ್ದೀರಿ ಎಂದೂ ಪ್ರಶ್ನಿಸಿದ್ದಾರೆ.
ಜೊತೆಗೆ 2016ರಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಔತಣಕೂಟದಲ್ಲಿ ಆಪ್ ಜೈಲಿನಲ್ಲಿರುವ ನಾಯಕ ಸತ್ಯೇಂದ್ರ ಜೈನ್ ಅವರೊಂದಿಗೆ ಕೇಜ್ರಿವಾಲ್ ಕೂಡ ಭಾಗವಹಿಸಿದ್ದರು ಎಂದು ಸುಕೇಶ್ ಆರೋಪಿಸಿದ್ದಾರೆ. ನಿಮ್ಮ ಸೂಚನೆಯ ಮೇರೆಗೆ ಅಸೋಲಾದ ಗೆಹ್ಲೋಟ್ ಫಾರ್ಮ್ ಹೌಸ್‌ನಲ್ಲಿ ನಾನು ಪಾವತಿಸಿದ 50 ಕೋಟಿ ರೂ.ಗಳನ್ನು ಸತ್ಯೇಂದ್ರ ಜೈನ್‌ಗೆ ತಲುಪಿಸಿದ್ದೆ. ನಂತರ ನಾನು ತಂಗಿದ್ದ ಭಿಕಾಜಿ ಕಾಮಾ ಪ್ಲೇಸ್‌ನ ಹಯಾತ್‌ನಲ್ಲಿ ಜೈನ್ ಅವರೊಂದಿಗೆ ನನ್ನ ಡಿನ್ನರ್ ಪಾರ್ಟಿಯಲ್ಲಿ ನೀವು ಏಕೆ ಭಾಗವಹಿಸಿದ್ದೀರಿ ಎಂದು ಕೇಳಿದ್ದಾರೆ.
ಇಷ್ಟೇ ಅಲ್ಲದೇ, ಕೇಜ್ರಿವಾಲ್ ಅವರೇ, ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಸೇವೆ ಸಲ್ಲಿಸಿದ ನಂತರ ಆಪ್ಗೆ ಸೇರುತ್ತಾರೆ ಎಂಬುವುದನ್ನು ಖಚಿತಪಡಿಸಿಕೊಳ್ಳಲು ನೀವು ನನ್ನನ್ನು ಏಕೆ ಒತ್ತಾಯಿಸಿದ್ದೀರಿ?. 2017ರಲ್ಲಿ ತಿಹಾರ್ ಜೈಲಿನಲ್ಲಿ ನನ್ನನ್ನು ಜೈನ್ ಭೇಟಿ ಮಾಡಲು ಬಂದಾಗ ಅವರ ಫೋನ್‌ನಲ್ಲಿ ನೀವು ನನ್ನೊಂದಿಗೆ ಏಕೆ ಮಾತನಾಡಿದ್ದೀರಿ?. ಐಫೋನ್‌ನಲ್ಲಿ ಹೆಸರನ್ನು ಎಕೆ-2 ಎಂದು ಸೇವ್ ಮಾಡಲಾಗಿದೆ ಎಂದೂ ಬಹಿರಂಗ ಪಡಿಸಿದ್ದಾರೆ.
ಕಾನೂನಿಗೆ ಉತ್ತರಿಸುವ ಸಮಯ ಬಂದಿದೆ: ಮುಂದುವರೆದು ಕೇಜ್ರಿವಾಲ್ ಅವರೇ, ತಮಿಳುನಾಡಿನ ಕೆಲ ಶಾಸಕರು ಮತ್ತು ನಟರನ್ನು ಆಪ್ಗೆ ಸೇರುವಂತೆ ಮನವೊಲಿಸಲು ನನಗೆ ಹೇಳುವಂತೆ ಜೈನ್ ಅವರಿಗೆ ಸೂಚಿಸಿದ್ದೀರಿ?. 2016 ಮತ್ತು 2017ರಲ್ಲಿ ನನ್ನ ಮೇಲೆ ಏಕೆ ನಿರಂತರ ಒತ್ತಡ ಹೇರಲಾಯಿತು?. ಜೈಲಿನಲ್ಲಿ ರಕ್ಷಣೆಗಾಗಿ ಜೈನ್‌ಗೆ 10 ಕೋಟಿ ಪಾವತಿಸಲು ನೀವು ಹೇಗೆ ಒಪ್ಪಿದ್ದೀರಿ ಎಂದು ಕೇಳಿದ್ದಾರೆ.
ಕೇಜ್ರಿವಾಲ್ ಅವರೇ, ನನ್ನ ಕಡೆಗೆ ಬೆರಳು ತೋರಿಸುವ ಮೊದಲು ಮತ್ತು ಈ ಸಮಸ್ಯೆಯನ್ನು ರಾಜಕೀಯಗೊಳಿಸುವ ಹಾಗೂ ಜನರ ಗಮನ ಬೇರೆಡೆ ಸೆಳೆಯುವ ಮುನ್ನ ನೀವು ಕಾನೂನಿಗೆ ಉತ್ತರಿಸುವ ಸಮಯ ಬಂದಿದೆ. ಏಕೆಂದರೆ ನಾನು ನಿಮ್ಮ ನಡುವಿನ ಪ್ರತಿಯೊಂದು ವ್ಯವಹಾರ ಮತ್ತು ಸಂಭಾಷಣೆಯ ಪುರಾವೆಗಳನ್ನು ಸಲ್ಲಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ತಿಹಾರ್ ಜೈಲು ಸಿಬ್ಬಂದಿಗೆ ಲಂಚ ನೀಡಿದ ವಂಚಕ ಸುಕೇಶ್.. ಬೇರೊಂದು ಜೈಲಿಗೆ ಶಿಫ್ಟ್