ರಾಜ್‌ಕೋಟ್ (ಗುಜರಾತ್): ಆಸ್ತಿ ವಿವಾದದಿಂದಾಗಿ ರಾಜ್ಕೋಟ್ನ ರಾಜಮನೆತನ ಕೋರ್ಟ್ ಮೆಟ್ಟಿಲೇರಿದೆ. 1,500 ಕೋಟಿ ರೂಪಾಯಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನ ವಿರುದ್ಧ ತಂಗಿ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.
1500 ಕೋಟಿ ರೂಪಾಯಿ ಆಸ್ತಿಗೆ ಸಂಬಂಧಿಸಿದಂತೆ ರಾಜ್ಕೋಟ್ನ ರಾಜಕುಮಾರ ಮಾಂಧಾತ ಸಿಂಗ್ ಜಡೇಜಾ (ಅಣ್ಣ) ತನಗೆ ಮೋಸ ಮಾಡಿದ್ದಾನೆ ಅಂತಾ ರಾಜಕುಮಾರಿ ಅಂಬಾಲಿಕಾ ಆರೋಪಿಸಿದ್ದರು. ಅಣ್ಣ ತನ್ನನ್ನು ಕತ್ತಲೆಯಲ್ಲಿಟ್ಟು ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ತನಗೆ ಅಪ್ಪನ ಆಸ್ತಿಯಲ್ಲಿ ಏನೂ ಬೇಡ ಎಂಬ ಅರ್ಥ ಬರುವಂಥ ದಾಖಲೆ ಸೃಷ್ಟಿಸಿ ಅದಕ್ಕೆ ಸಹಿ ಹಾಕಿಸಿಕೊಂಡಿರುವುದಾಗಿ ಅಂಬಾಲಿಕಾ ಆರೋಪಿಸಿದ್ದಾರೆ.
ಸದ್ಯ ಈ ವಿವಾದ ಉಪವಿಭಾಗದ ನ್ಯಾಯಾಲಯದಲ್ಲಿ ತೀರ್ಮಾನ ಆಗಿದ್ದು, ಅಂಬಾಲಿಕಾ ಪರವಾಗಿ ಆದೇಶ ಹೊರಬಿದ್ದಿದೆ. ಆದರೆ, ರಾಜಕುಮಾರ ಈ ಆದೇಶವನ್ನು ಪ್ರಶ್ನಿಸಿ ಉನ್ನತ ಕೋರ್ಟ್‌ಗೆ ಹೋಗಲು ಮುಂದಾಗಿದ್ದಾರೆ. ಸದ್ಯ ಉಪವಿಭಾಗದ ಕೋರ್ಟ್ ನೀಡಿರುವ ಆದೇಶದನ್ವಯ ಕುಟುಂಬದಲ್ಲಿನ 1,500 ಕೋಟಿಗಳ ಚರ ಮತ್ತು ಸ್ಥಿರ ಆಸ್ತಿ ವಿಭಜನೆಯಾಗಬೇಕಿದೆ.
ನಿಯಮದ ಪ್ರಕಾರ ಇದನ್ನು ಉನ್ನತ ಕೋರ್ಟ್‌ನಲ್ಲಿ ಪ್ರಶ್ನಿಸಲು 60 ದಿನಗಳ ಅವಕಾಶವಿದ್ದು, ಅದನ್ನು ಸಲ್ಲಿಸಲಾಗುವುದು ಎಂದು ರಾಜ ಕುಟುಂಬದ ಕಾನೂನು ಸಲಹೆಗಾರ ತಿಳಿಸಿದ್ದಾರೆ. ಇದಕ್ಕಾಗಿ ಸಿದ್ಧತೆ ನಡೆಸಲಾಗಿದೆ.
ಏನಿದು ವಿವಾದ?
ಗುಜರಾತಿನ ಮಾಜಿ ಹಣಕಾಸು ಸಚಿವ ಮತ್ತು ರಾಜಕೋಟ್ ರಾಜಕುಮಾರ ಮನೋಹರ್ ಜಡೇಜಾ ಅವರು ಮೃತಪಟ್ಟ ನಂತರ ಈ ವಿವಾದ ನಡೆದಿದೆ. ರಾಜ ಮಾಂಧಾತ ಸಿಂಗ್ ತನ್ನ ಸಹೋದರನ ಆಸೆಯಂತೆ ತನ್ನ ಸಹೋದರಿ ಅಂಬಾಲಿಕಾ ದೇವಿಗೆ 1.5 ಕೋಟಿ ರೂಪಾಯಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ತಮಗೆ ಆ ಆಸ್ತಿ ಬಂದಿಲ್ಲ ಎನ್ನುವುದು ಅಂಬಾಲಿಕಾ ದೇವಿ ಆರೋಪ. ಆದ್ದರಿಂದ ಸಹೋದರ ಸೇರಿದಂತೆ ತನ್ನ ತಾಯಿ ಹಾಗೂ ಇಬ್ಬರು ಸಹೋದರಿಯರ ವಿರುದ್ಧ ಅಂಬಾಲಿಕಾ ದೇವಿ ಕೇಸ್ ದಾಖಲು ಮಾಡಿದ್ದಾರೆ.