ಸೂರತ್ (ಗುಜರಾತ್) : ಗುಜರಾತ್ನ ಸೂರತ್ನಲ್ಲಿ ಸ್ವಚ್ಛತೆ ಮಾಡುವಾಗ ಸಿಕ್ಕ ಸುಮಾರು ಒಂದು ಲಕ್ಷ ರೂ. ಬೆಲೆಬಾಳುವ ವಜ್ರಗಳನ್ನು ಸಫಾಯಿ ಕರ್ಮಚಾರಿಯೊಬ್ಬರು ಮರಳಿ ಮಾಲೀಕರಿಗೆ ಮುಟ್ಟಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಇಲ್ಲಿನ ಪಂಚದೇವ್ ಎಂಬ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ವಿನೋದ್ ಭಾಯ್ ಸೋಲಂಕಿ ಎಂಬುವರಿಗೆ ವಜ್ರಗಳಿದ್ದ ಎರಡು ಪ್ಯಾಕೇಟ್‌ಗಳು ದೊರೆತಿವೆ. ಆಗ ತಕ್ಷಣವೇ ವಿನೋದ್, ಈ ವಿಷಯವನ್ನು ಕಾರ್ಖಾನೆ ಮಾಲೀಕರಿಗೆ ತಿಳಿಸಿದ್ದಾರೆ. ಮಾಲೀಕರು ಸೂರತ್ ವಜ್ರ ಸಂಘದವರಿಗೆ ಸಂಪರ್ಕಿಸಿ, ವಜ್ರಗಳಿದ್ದ ಎರಡು ಪ್ಯಾಕೇಟ್‌ಗಳು ಸಿಕ್ಕ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಂತೆಯೇ, ಸಂಘದವರು ಈ ವಜ್ರಗಳನ್ನು ಯಾರು ಕಳೆದುಕೊಂಡಿದ್ದಾರೆ ಎಂಬುವುದನ್ನು ಪತ್ತೆ ಹೆಚ್ಚಿದ್ದಾರೆ. ಈ ವೇಳೆ ರಮೇಶ್ ಭಾಯ್ ಎಂಬುವರಿಗೆ ಸೇರಿರುವುದಾಗಿ ಖಚಿತವಾಗಿದೆ. ನಂತರ ಇವುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಜೊತೆಗೆ ಸಿಕ್ಕ ವಜ್ರಗಳನ್ನು ಮರಳಿ ಕೊಟ್ಟು ಪ್ರಾಮಾಣಿಕತೆ ಮೆರೆದ ವಿನೋದ್ ಅವರಿಗೆ ಸಂಘದವರು ಹಾಗೂ ವಜ್ರದ ಮಾಲೀಕರು ಸನ್ಮಾನಿಸಿ ಗೌರವಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತನ ಬಿಟ್ಟು ಮದುವೆ ಮೆರವಣಿಗೆ ಹೋದ ವರನ ಮೇಲೆ ಮಾನನಷ್ಟ ಮೊಕದ್ದಮೆ!