ಬಿಜಾಪುರ: ಏಪ್ರಿಲ್ 3 ರಂದು ಛತ್ತೀಸ್ಗಡದಲ್ಲಿ ನಡೆದ ಭದ್ರತಾ ಪಡೆ ಮತ್ತು ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಕಮಾಂಡೋವನ್ನು ನಕ್ಸಲರು ಅಪಹರಿಸಿದ್ದಾರೆ. ಈ ಕುರಿತು ಇಂದು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕೆಂಪು ಉಗ್ರರು ಬುಧವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಛತ್ತೀಸ್ಗಡ ರಾಜ್ಯ ಸರ್ಕಾರವು ಮಧ್ಯವರ್ತಿಯನ್ನು ಘೋಷಿಸಬೇಕು. ಆಗ ಮಾತ್ರ ಕಮಾಂಡೋವನ್ನು ಬಿಡುಗಡೆ ಮಾಡುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪತ್ರ ನಿಜವಾದದ್ದು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಸ್ತಾರ್ ಇನ್ಸ್‌ಪೆಕ್ಟರ್ ಜನರಲ್ (ಐಜಿ)ಪಿ ಸುಂದರ್‌ರಾಜ್, “ಏಪ್ರಿಲ್ 3 ರಂದು ನಡೆದ ನಕ್ಸಲ್ ದಾಳಿಯಲ್ಲಿ ಕೋಬ್ರಾ ಜವಾನ್ ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ನಕ್ಸಲರು ಅಪಹರಿಸಿದ್ದಾರೆ. ಅವರು ಈಗ ನಕ್ಸಲರ ಒತ್ತೆ ಆಳು ಆಗಿದ್ದಾರೆ. ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ" ಎಂದಿದ್ದಾರೆ.
ನಕ್ಸಲರ ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಪರವಾಗಿ "ವಿಕಾಲ್ಪ್" ಸಹಿ ಮಾಡಿದ ತೆಲುಗಿನಲ್ಲಿರುವ 2 ಪುಟಗಳ ಪತ್ರದಲ್ಲಿ, "2 ಸಾವಿರ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಏಪ್ರಿಲ್ 3 ರಂದು ತಾರೆಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ಕು ಜನರ ವಿಮೋಚನಾ ಗೆರಿಲ್ಲಾ ಸೈನ್ಯ (ಪಿಎಲ್‌ಜಿಎ) ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. 14 ಶಸ್ತ್ರಾಸ್ತ್ರಗಳು, 2,000 ಸುತ್ತುಗಳ ಮದ್ದುಗುಂಡುಗಳು ಮತ್ತು ಭದ್ರತಾ ಸಿಬ್ಬಂದಿಗೆ ಸೇರಿದ ಇತರ ವಸ್ತುಗಳನ್ನು ಸಹ ತೆಗೆದುಕೊಂಡಿದ್ದೇವೆ" ಎಂದು ಉಲ್ಲೇಖಿಸಲಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 2020 ರಿಂದ ನಕ್ಸಲರನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಬೃಹತ್ ದಾಳಿಯ ಯೋಜನೆಯನ್ನು ರೂಪಿಸಲಾಗುತ್ತಿದೆ. ನಕ್ಸಲರು ಮಾತುಕತೆಗೆ ಸಿದ್ಧರಾಗಿದ್ದಾರೆ ಮತ್ತು ಸರ್ಕಾರ ಪ್ರಾಮಾಣಿಕವಲ್ಲ ಎಂದು ಆರೋಪಿಸಲಾಗಿದೆ.
ಕಳೆದ ಶನಿವಾರ ಮತ್ತು ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು, 35ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದಾರೆ.
ಈ ಘಟನೆಯನ್ನು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ, ನಕ್ಸಲರ ವಿರುದ್ಧ ಪ್ರತೀಕಾರ ಶತಃಸಿದ್ಧ. ಯೋಧರ ತ್ಯಾಗ ವ್ಯರ್ಥವಾಗಲು ಬಿಡಲ್ಲ ಎಂದು ಶಾ ಗುಡುಗಿದ್ದರು.