ಹೈದರಾಬಾದ್: ಕೇಂದ್ರ ಸರ್ಕಾರ ಸೇನಾ ನೇಮಕಾತಿಗೆ ಹೊಸ ಯೋಜನೆ ಜಾರಿ ಮಾಡಿದೆ. ಅಗ್ನಿಪಥ ಯೋಜನೆ ಭಾಗಿ ಅಗ್ನಿವೀರರ ನೇಮಕ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿತ್ತು. ಆದರೆ ಈ ಯೋಜನೆ ವಿರೋಧಿಸಿ, ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟಗಳಾಗಿದ್ದವು.
ಸಿಕಂದರ್ಬಾದ್ ರೈಲು ನಿಲ್ದಾಣದಲ್ಲಿ ಪ್ರತಿಭಟನಕಾರರು ರೈಲಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿಯನ್ನು ನಡೆಸಿದ್ದರು. ಅದರಲ್ಲಿ ರಾಕೇಶ್ ಎನ್ನುವ ಯುವಕನಿಗೆ ಗುಂಡು ತಗುಲಿ ಮೃತಪಟ್ಟಿದ್ದ. ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆಯನ್ನು, ಹಿಂಸಾತ್ಮಕ ರೂಪಕ್ಕೆ ತಿರುಗುವಂತೆ ಯಾರೋ ಪ್ರಚೋದನೆ ನೀಡಿದ್ದಾರೆ ಎಂಬ ಮಾತಗಳು ಕೇಳಿಬರುತ್ತಿದ್ದ ಬೆನ್ನಲ್ಲೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಇದೀಗ ಈ ವಿಧ್ವಂಸಕ ಕೃತ್ಯದಲ್ಲಿ ಸಾಯಿ ಡಿಫೆನ್ಸ್ ಅಕಾಡೆಮಿ ನಿರ್ದೇಶಕ ಸುಬ್ಬರಾವ್ನ ಕೈವಾಡವಿರುವುದಾಗಿ ಖಚಿತ ಆಧಾರಗಳು ದೊರೆತಿವೆ.
ಜೂನ್ 16ಕ್ಕೆ ಹೈದರಾಬಾದ್‌ಗೆ ಬಂದಿದ್ದ ಸುಬ್ಬರಾವ್: ಜೂನ್ 16ರಂದು ಸುಬ್ಬರಾವ್ ಅವರು ತಮ್ಮ ಹಿಂಬಾಲಕರೊಂದಿಗೆ ಗುಂಟೂರಿನಿಂದ ಹೈದರಾಬಾದ್‌ಗೆ ಆಗಮಿಸಿ, ಸಿಕಂದರಾಬಾದ್ ರೈಲು ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ತಂಗಿದ್ದರು. ತಮ್ಮ ಅನುಯಾಯಿಗಳಾದ ಶಿವ ಹಾಗೂ ಮಲ್ಲಾರೆಡ್ಡಿ ಅವರಿಗೆ ಪ್ರತಿಭಟನಕಾರರನ್ನು ಕರೆ ತನ್ನಿ ಎಂದು ಹೇಳಿದ್ದರು. ನಂತರ ಪ್ರತಿಭಟನಕಾರರೊಂದಿಗೆ ಆ ರಾತ್ರಿ ಪ್ರತಿಭಟನೆ ಕುರಿತು ಸಮಾಲೋಚನೆ ನಡೆಸಿದ್ದಾರೆ. ರೈಲು ನಿಲ್ದಾಣಕ್ಕೆ ನುಗ್ಗಿ ಪ್ರತಿಭಟನೆ ನಡೆಸುವಂತೆ ಸೂಚಿಸಿದ್ದಾರೆ. ವಿಧ್ವಂಸಕ ಕೃತ್ಯ ಆರಂಭವಾದ ಕೆಲವೇ ದಿನಗಳಲ್ಲಿ ಆತ ಗುಂಟೂರಿಗೆ ಪರಾರಿಯಾಗಿದ್ದ ಎಂದು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದರು.
ಅಗ್ನಿಪಥದ ವಿರುದ್ಧ ಸೇನಾ ಆಕಾಂಕ್ಷಿಗಳು ಆಯೋಜಿಸಿದ್ದ ಪ್ರತಿಭಟನೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳಲ್ಲಿ ಸುಬ್ಬರಾವ್ ಭಾಗಿಯಾಗಿದ್ದಾರೆ ಎಂದು ಈ ಹಿಂದೆ ಶಂಕಿಸಿಲಾಗಿತ್ತು. ವಿಧ್ವಂಸಕ ಕೃತ್ಯದ ಅರ್ಧ ಗಂಟೆಯೊಳಗೆ, ಹದಿನೈದು ಪೊಲೀಸ್ ಅಧಿಕಾರಿಗಳು ಮತ್ತು ಮೂವರು ಇನ್ಸ್‌ಪೆಕ್ಟರ್‌ಗಳು, ಪ್ರತಿಭಟನಾಕಾರರಿಂದ ವಶಕ್ಕೆ ಪಡೆದುಕೊಂಡ ಮೊಬೈಲ್ ತನಿಖೆಗೆ ಒಳಪಡಿಸಿದ್ದರು. ಅದರಲ್ಲಿ ಪ್ರತಿಭಟನೆ ಕುರಿತಾಗಿ ರಚಿಸಲಾಗಿದ್ದ, ವಾಟ್ಸ್ಆ್ಯಪ್ ಗ್ರೂಪ್ಗಳನ್ನು ಪರಿಶೀಲಿಸಿ ಗ್ರೂಪ್ನ ಸದಸ್ಯರ ಫೋನ್ ನಂಬರ್ಗಳನ್ನು ತೆಗೆದುಕೊಂಡಿದ್ದರು.
ಪ್ರತಿಭಟನಕಾರರು ರಚಿಸಿದ ಎಂಟು ವಾಟ್ಸ್ಆ್ಯಪ್ ಗ್ರೂಪ್‌ಗಳ ಪೈಕಿ ನಾಲ್ಕರಲ್ಲಿ ಸುಬ್ಬರಾವ್ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ನಂತರ ಇನ್ಸ್ ಪೆಕ್ಟರ್ ಸುಬ್ಬರಾವ್ಗೆ ಕರೆ ಮಾಡಿ ಎಲ್ಲಿದ್ದೀರಿ ಎಂದು ಕೇಳಿದ ತಕ್ಷಣ ಫೋನ್ ಸ್ವಿಚ್ಡ್ ಆಫ್ ಮಾಡಿದ್ದಾರೆ. ನಂತರ ಹಿಂಬಾಲಕರಿಗೆ ಮಾಸ್ಕ್ ಹಾಕಿಕೊಂಡು ಠಾಣೆಗೆ ನುಗ್ಗಿ ಎಚ್ಚರಿಕೆ ನೀಡಿ ಪರಾರಿಯಾಗುವಂತೆ ಸೂಚಿಸಿದ್ದರು. ಬಳಿಕ ಸುಬ್ಬರಾವ್ ಹೋಟೆಲ್ ಖಾಲಿ ಮಾಡಿ ಗುಂಟೂರಿಗೆ ತೆರಳಿದ್ದರು ಎಂದು ಮಾಹಿತಿಯಲ್ಲಿ ತಿಳಿದು ಬಂದಿದೆ.
ಸುಬ್ಬರಾವ್ ಬಂಧನ: ಸುಬ್ಬರಾವ್ ಅವರನ್ನು ಪ್ರಕರಣದ ಶಂಕಿತ ಎಂದು ಪರಿಗಣಿಸಿರುವ ರೈಲ್ವೆ ಪೊಲೀಸರು, ಅವರನ್ನು ಬಂಧಿಸಲು ಇದೇ ತಿಂಗಳ 19ರಂದು ಗುಂಟೂರಿಗೆ ತೆರಳಿದ್ದರು. ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದರು. ಖಚಿತ ಮಾಹಿತಿಗಳು ದೊರೆತ ಬಳಿಕ ಮಂಗಳವಾರ ರಾತ್ರಿ ಆತನನ್ನು ಬಂಧಿಸಿದ ಪೊಲೀಸರು ಹೈದರಾಬಾದ್‌ಗೆ ಕರೆತಂದಿದ್ದರು.
ಬುಧವಾರದಿಂದ ವಿಚಾರಣೆ ನಡೆಸುತ್ತಿದ್ದು, ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಅನುಯಾಯಿಗಳಾದ ಶಿವ, ಮಲ್ಲಾರೆಡ್ಡಿ ಸೇರಿದಂತೆ ಇನ್ನೂ ಮೂವರನ್ನು ಟಾಸ್ಕ್ ಪೋರ್ಸ್ ಪೊಲೀಸರು ಗುರುವಾರ ಸಂಜೆ ಬಂಧಿಸಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರನ್ನು ಪ್ರಶ್ನಿಸಿದಾಗ, ಸುಬ್ಬರಾವ್ ಅವರು ರೈಲ್ವೆ ವಿಧ್ವಂಸದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಇದೇ ತಿಂಗಳ 16ರಂದು ಸಿಕಂದರಾಬಾದ್ಗೆ ಆಗಮಿಸಿದ್ದಾಗಿ ಸುಬ್ಬರಾವ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗುಜರಾತ್ ಗಲಭೆ 2002: ಮೋದಿಗೆ ಕ್ಲೀನ್ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ