ನವದೆಹಲಿ: 2020-21ರ ಕೋವಿಡ್ ಅವಧಿಯಲ್ಲಿ ರೈಲ್ವೆ ಇಲಾಖೆ ತತ್ಕಾಲ್ ಟಿಕೆಟ್‌ಗಳಿಂದ 403 ಕೋಟಿ ರೂ., ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳಿಂದ ಹೆಚ್ಚುವರಿ 119 ಕೋಟಿ ರೂ. ಹಾಗೂ ಡೈನಾಮಿಕ್ ದರಗಳಿಂದ 511 ಕೋಟಿ ರೂ. ಗಳಿಸಿದೆ. ಈ ಮೂರು ವರ್ಗಗಳ ಪ್ರಯಾಣಿಕರು ಸಾಮಾನ್ಯವಾಗಿ ಕೊನೆ ಸಮಯದ ಪ್ರಯಾಣಿಕರಾಗಿದ್ದು, ಪ್ರೀಮಿಯಂ ಶುಲ್ಕವನ್ನು ಪಾವತಿಸುವ ಮೂಲಕ ತುರ್ತು ಪ್ರಯಾಣಕ್ಕಾಗಿ ಈ ಸೇವೆಗಳನ್ನು ಹೆಚ್ಚಾಗಿ ಪಡೆಯುತ್ತಾರೆ.
ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಅವರು ಆರ್‌ಟಿಐಗೆ ಸಲ್ಲಿಸಿದ ಉತ್ತರದಲ್ಲಿ 2021-22ನೇ ಹಣಕಾಸು ವರ್ಷದ ಸೆಪ್ಟೆಂಬರ್ ವರೆಗೆ ಡೈನಾಮಿಕ್ ದರಗಳಿಂದ 240 ಕೋಟಿ ರೂ., ತತ್ಕಾಲ್ ಟಿಕೆಟ್‌ಗಳಿಂದ 353 ಕೋಟಿ ರೂ.ಹಾಗೂ ಪ್ರೀಮಿಯಂ ತತ್ಕಾಲ್ ಶುಲ್ಕದಿಂದ 89 ಕೋಟಿ ರೂ. ಗಳಿಸಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
2019-20 ಹಣಕಾಸು ವರ್ಷದಲ್ಲಿ, ರೈಲು ಕಾರ್ಯಾಚರಣೆಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲದಿದ್ದಾಗ, ರಾಷ್ಟ್ರೀಯ ಸಾರಿಗೆಯು ಡೈನಾಮಿಕ್ ದರಗಳಿಂದ 1,313 ಕೋಟಿ ರೂ., ತತ್ಕಾಲ್ ಟಿಕೆಟ್‌ಗಳಿಂದ 1,669 ಕೋಟಿ ರೂ. ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳಿಂದ 603 ಕೋಟಿ ರೂ.ಗಳಿಸಿದೆ.
ತತ್ಕಾಲ್ ಟಿಕೆಟ್‌ಗಳ ಮೇಲೆ ವಿಧಿಸುವ ಶುಲ್ಕಗಳು ಸ್ವಲ್ಪ ಅಸಮರ್ಥನೀಯವಾಗಿದ್ದು, ವಿಶೇಷವಾಗಿ ಆರ್ಥಿಕವಾಗಿ ದುರ್ಬಲವಾಗಿರುವ ಮತ್ತು ತುರ್ತು ಪ್ರಯಾಣಕ್ಕೆ ಮುಂದಾಗುವ ಪ್ರಯಾಣಿಕರ ಮೇಲೆ ಭಾರಿ ಹೊರೆಯನ್ನು ಹಾಕುತ್ತವೆ ಎಂದು ರೈಲ್ವೆಯ ಸಂಸದೀಯ ಸ್ಥಾಯಿ ಸಮಿತಿ ಟೀಕಿಸಿದ ಒಂದು ತಿಂಗಳ ನಂತರ ರೈಲ್ವೆ ಸಚಿವಾಲಯದ ಅಂಕಿ-ಅಂಶಗಳು ಬಹಿರಂಗವಾಗಿವೆ.
ತತ್ಕಾಲ್ ಟಿಕೆಟ್ ಶುಲ್ಕವನ್ನು ಎರಡನೇ ದರ್ಜೆಯ ಮೂಲ ದರದ ಶೇ.10ರಷ್ಟು ಹಾಗೂ ಇತರ ಎಲ್ಲಾ ದರ್ಜೆಗಳಿಗೆ ಕನಿಷ್ಠ ಮತ್ತು ಗರಿಷ್ಠಕ್ಕೆ ಒಳಪಟ್ಟು ಮೂಲ ದರದ ಮೇಲಿನ ಶೇ.30ರಲ್ಲಿ ದರ ನಿಗದಿಪಡಿಸಲಾಗುತ್ತದೆ.
ಇತರ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಸಿದರೆ ರಾಜಧಾನಿ, ಶತಾಬ್ದಿ ಮತ್ತು ದುರಂಟೋ ರೈಲುಗಳ ದರಗಳು ಈಗಾಗಲೇ ಹೆಚ್ಚಿವೆ. ಫ್ಲೆಕ್ಸಿ ಅಥವಾ ಡೈನಾಮಿಕ್ ಬೆಲೆಗಳಲ್ಲಿ ಸ್ವಲ್ಪ ತಾರತಮ್ಯ ತೋರುತ್ತಿವೆ ಎಂದು ಸಮಿತಿ ಹೇಳಿದೆ.
ಇದನ್ನೂ ಓದಿ: ಗುಜರಿ ವಸ್ತುಗಳ ಹರಾಜಿನಿಂದ ರೈಲ್ವೆಗೆ ಬಂತು 100 ಕೋಟಿ ರೂ. ಲಾಭ