ನವದೆಹಲಿ: ದೆಹಲಿಯ ನೂತನ ಮುಖ್ಯ ಕಾರ್ಯದರ್ಶಿ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಸಭೆ ಮಾಡಲಿ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ನಿರ್ದೇಶನ ನೀಡಿದೆ. ಹೊಸ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಐವರ ಹೆಸರುಗಳ ಪಟ್ಟಿ ಸಲ್ಲಿಸಲು ಕೇಂದ್ರಕ್ಕೆ ಸೂಚಿಸಿದ್ದು, ಆ ಪಟ್ಟಿಯಿಂದ ದೆಹಲಿ ಸರ್ಕಾರವು ಒಬ್ಬರ ಆಯ್ಕೆಗೆ ಸಲಹೆ ಮಾಡಬಹುದು ಎಂದು ಹೇಳಿದೆ.
ಈ ತಿಂಗಳು ನಿವೃತ್ತಿ ಆಗಬೇಕಿರುವ ಹಾಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಸೇವಾವಧಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರ ನಿರ್ಧಾರದ ವಿರುದ್ಧ ದೆಹಲಿ ಸರ್ಕಾರ ಅರ್ಜಿ ಸಲ್ಲಿಸಿದೆ. ಇದನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿದೆ.
ದೆಹಲಿ ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ''ಮುಖ್ಯ ಕಾರ್ಯದರ್ಶಿಯನ್ನು ಯಾವಾಗಲೂ ದೆಹಲಿ ಸರ್ಕಾರ ನೇಮಿಸುತ್ತದೆ. ಈಗ ಸುಗ್ರೀವಾಜ್ಞೆ ಜಾರಿ ಮಾಡಲಾಗಿದೆ. ಆದರೆ, ನಾನು ಆಕ್ಷೇಪಿಸುತ್ತಿರುವುದು ಲೆಫ್ಟಿನೆಂಟ್ ಗವರ್ನರ್ ಅವರ ಏಕಪಕ್ಷೀಯ ನಿರ್ಧಾರವನ್ನು'' ಎಂದು ಪೀಠಕ್ಕೆ ತಿಳಿಸಿದರು. ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, ''ಮುಖ್ಯ ಕಾರ್ಯದರ್ಶಿಯನ್ನು ಗೃಹ ವ್ಯವಹಾರಗಳ ಸಚಿವಾಲಯ ನೇಮಿಸಿದೆ. ದೆಹಲಿ ಸೇವೆಗಳ ಮಸೂದೆ ತಿದ್ದುಪಡಿಗೂ ಮುಂಚೆಯೇ ನೇಮಕ ಮಾಡಿದೆ. ಈಗ ಪ್ರಕ್ರಿಯೆ ನಡೆಯುತ್ತಿದೆ'' ಎಂದರು.
ಈ ವೇಳೆ, ''ಮುಖ್ಯಮಂತ್ರಿಯ ಶಿಫಾರಸಿನ ಮೇರೆಗೆ ಗೃಹ ಸಚಿವಾಲಯವು ಔಪಚಾರಿಕ ನೇಮಕಾತಿ ಮಾಡಿದೆ'' ಎಂದು ಸಿಂಘ್ವಿ ಹೇಳಿದರು. ಈ ವಾದವನ್ನು ಮೆಹ್ತಾ ಒಪ್ಪಲಿಲ್ಲ. ಈ ಸಂದರ್ಭದಲ್ಲಿ ಸಿಜೆಐ ಚಂದ್ರಚೂಡ್ ಮಾತನಾಡಿ, ''ಅಂತಿಮವಾಗಿ ಗೃಹ ಸಚಿವಾಲಯ ನೇಮಕಾತಿ ಮಾಡಬೇಕು. ನೀವಿಬ್ಬರೂ (ಸಿಂಘ್ವಿ - ಮೆಹ್ತಾ) ನಮಗೆ ಕೆಲವು ಕಾರ್ಯಸಾಧ್ಯವಾದ ಪರಿಹಾರವನ್ನು ಏಕೆ ನೀಡಬಾರದು?, ಅದು ಕೇಂದ್ರ ಸರ್ಕಾರದ ಕಾಳಜಿ ಪೂರೈಸುತ್ತದೆ ಹಾಗೂ ರಾಜ್ಯದ ಚುನಾಯಿತ ಸರ್ಕಾರದಲ್ಲಿರುವ ಅಧಿಕಾರಿಯಲ್ಲಿ ವಿಶ್ವಾಸ ಹೆಚ್ಚಿಸುತ್ತದೆ'' ಎಂದು ಸಲಹೆ ನೀಡಿದರು.
ಮುಂದುವರೆದು ಸಿಜೆಐ, ''ಒಂದು ಸಾಧ್ಯವಿರುವ ಮಾರ್ಗ ಎಂದರೆ, ಮುಕ್ತ ಪ್ರಕ್ರಿಯೆಗಾಗಿ ಎಲ್‌ಜಿ ಮತ್ತು ಸಿಎಂ ಸಭೆ ಮಾಡುವುದು. ಇದನ್ನು ಕಳೆದ ಬಾರಿ ಡಿಇಆರ್‌ಸಿ ಅಧ್ಯಕ್ಷರ ನೇಮಕದ ಸಂದರ್ಭದಲ್ಲಿ ನಾವು ಹೇಳಿದ್ದೆವು. ಅವರು ಎಂದಿಗೂ ಒಪ್ಪಲಿಲ್ಲ. ಕೊಟ್ಟು ಮತ್ತು ತೆಗೆದುಕೊಳ್ಳುವುದು ಇರಬೇಕು. ಆಗ ಇಬ್ಬರೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಹೇಳಿದರು.
''ಲೆಫ್ಟಿನೆಂಟ್ ಗವರ್ನರ್ ಮತ್ತು ಕೇಂದ್ರದಿಂದ ಹೆಸರುಗಳ ಪೆನಲ್ ಸೂಚಿಸಬಹುದು. ಅಂತಿಮ ಆಯ್ಕೆಯು ನೀವು ಮಾಡಿದ ಪೆನಲ್ನಿಂದ ಆಗುತ್ತದೆ. ಈ ಜನರು ಅನುಭವಿ ಐಎಎಸ್ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಒಳ್ಳೆಯವರು ಆಗಿರುತ್ತಾರೆ. ನಂತರ ಅವರು (ದೆಹಲಿ ಸರ್ಕಾರ) ನೀವು ನೀಡಿದ್ದ ಸಲಹೆಯಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಾರೆ'' ಎಂದು ಸಿಜೆಐ ತಿಳಿಸಿದರು. ಈ ವೇಳೆ, ಲೆಫ್ಟಿನೆಂಟ್ ಗವರ್ನರ್ ಪರ ವಕೀಲ ಹರೀಶ್ ಸಾಳ್ವೆ, ''ಆಯ್ಕೆ ಮಾಡಲು ಹಂಚಿಕೊಂಡ ಹೆಸರುಗಳನ್ನು ಇನ್ಸ್ಟಾಗ್ರಾಂ ಮತ್ತು ಟ್ವಿಟರ್ನಲ್ಲಿ ಪ್ರಕಟಿಸಬಾರದು'' ಎಂದರು. ಇದಕ್ಕೆ ಸಿಜೆಐ ಸಹಮತ ವ್ಯಕ್ತಪಡಿಸಿದರು.
ಮತ್ತೊಂದೆಡೆ, ಕೇಂದ್ರದ ಪರವಾಗಿ ಮೆಹ್ತಾ ಕೂಡ ಪೀಠದ ಸಲಹೆ ಒಪ್ಪಿಕೊಂಡರು. ಜೊತೆಗೆ ಪೀಠದ ನಿರ್ದೇಶನದಂತೆ ಪಟ್ಟಿಯೊಂದಿಗೆ ಬರುವುದಾಗಿ ತಿಳಿಸಿದರು. ಆದರೆ, ವಿಚಾರಣೆಯ ಕೊನೆಯಲ್ಲಿ ಅಧಿಕಾರಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಹೆಚ್ಚು ಹೇಳಬೇಕಾಗಿದೆ ಎಂದು ಮೆಹ್ತಾ ಹೇಳಿದರು. ಆಗ ದೆಹಲಿ ಸರ್ಕಾರದ ಪರ ಸಿಂಘ್ವಿ, ''ನಮಗೆ ಯಾವುದೇ ಅಧಿಕಾರವಿಲ್ಲ. ಎಲ್ಲ ಅಧಿಕಾರಿಗಳು ಲೆಫ್ಟಿನೆಂಟ್ ಗವರ್ನರ್ ಅಡಿಯಲ್ಲಿದ್ದಾರೆ'' ಎಂದು ಸ್ಪಷ್ಟನೆ ನೀಡಿದರು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ನ್ಯಾಯಪೀಠ ಮುಂದೂಡಿತು.
ಇದನ್ನೂ ಓದಿ: ಅಕ್ರಮ ಆಸ್ತಿ ಪ್ರಕರಣ: ಆಂಧ್ರ ಸಿಎಂ ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್