ತಿರುವಳ್ಳೂರು(ತಮಿಳುನಾಡು) : ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ಪಂಚಾಯತ್ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. 2010ರಲ್ಲಿ ಅಣ್ಣಂಪೇಡು ಪಂಚಾಯತ್‌ಗೆ ಪಂಚಾಯತ್ ಕಾರ್ಯದರ್ಶಿಯಾಗಿ ಚಂದನ್‌ರಾಜ್ ನೇಮಕಗೊಂಡಿದ್ದರು. ಆದರೆ, 2015ರಲ್ಲಿ ತಾನು ತೃತೀಯಲಿಂಗಿ ಎಂದು ಭಾವಿಸಿ ಮಾನಸಿಕ ಒತ್ತಡದಿಂದ ಕೆಲಸಕ್ಕೆ ಬರಲಾಗದೆ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.
ಶಸ್ತ್ರಚಿಕಿತ್ಸೆಗೆ ಒಳಗಾಗಿ ತೃತೀಯ ಲಿಂಗಿಯಾಗಿ ಬದಲಾದ ಚಂದನ್ರಾಜ್ ದಾತ್ಸಾಯನಿ ನಂತರ 2020ರಲ್ಲಿ ಪಂಚಾಯತ್ ಕಾರ್ಯದರ್ಶಿ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸಿದ್ದರು. ತಿರುವಳ್ಳೂರು ಜಿಲ್ಲಾಧಿಕಾರಿ ಡಾ.ಅಲ್ಬಿಜಾನ್ ವರ್ಗೀಸ್ 2022ರಲ್ಲಿ ಚಂದನ್ರಾಜ್ ದಾತ್ಸಾಯನಿ ಅವರನ್ನು ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಿ, ನೇಮಕಾತಿ ಆದೇಶವನ್ನು ನೀಡಿದರು.
ಇದನ್ನೂ ಓದಿ: ಸೂರ್ಯನ ಸಮೀಪದ ಚಿತ್ರ ಸೆರೆಹಿಡಿದ ಯೂರೋಪಿಯನ್ ಸ್ಪೇಸ್ ಏಜೆನ್ಸಿ-ನಾಸಾ ಮಿಷನ್
ಮಾಧ್ಯಮದೊಂದಿಗೆ ಮಾತನಾಡಿದ ದಾತ್ಸಾಯನಿ, ತಮಿಳುನಾಡಿನಲ್ಲಿ ಇದೇ ಪ್ರಥಮ ಬಾರಿಗೆ ತೃತೀಯಲಿಂಗಿಯೊಬ್ಬರಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗ ನೀಡಲಾಗಿದೆ. ತೃತೀಯಲಿಂಗಿಗಳಲ್ಲೂ ಪ್ರತಿಭೆಗಳಿವೆ. ಅವರಿಗೂ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಿ, ಮಾನ್ಯತೆ ನೀಡಬೇಕು ಎಂದು ಮನವಿ ಮಾಡಿದರು.