ಚೆನ್ನೈ(ತಮಿಳುನಾಡು): ಸಾಮಾಜಿಕ ಜಾಲತಾಣ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲ ವಿಷಯಗಳಲ್ಲೂ ಬಳಕೆಯಾಗ್ತಿದ್ದು, ಇದೀಗ ಕೋರ್ಟ್ಗೂ ಲಗ್ಗೆ ಇಟ್ಟಿದೆ. ಅಂತಹ ಅಪರೂಪದ ಪ್ರಕರಣವೊಂದು ತಮಿಳುನಾಡಿನ ಮದ್ರಾಸ್ ಹೈಕೋರ್ಟ್ನಲ್ಲಿ ನಡೆದಿದೆ. ವಾಟ್ಸಾಪ್ ಮೂಲಕವೇ ನ್ಯಾಯಮೂರ್ತಿಗಳು ಪ್ರಕರಣ ಇತ್ಯರ್ಥ ಪಡಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ಇತಿಹಾಸದಲ್ಲೇ ಮೊದಲ ಸಲ ಇಂತಹದೊಂದು ಪ್ರಕರಣ ನಡೆದಿದ್ದು, ನ್ಯಾಯಮೂರ್ತಿಗಳು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರಣ ವಾಟ್ಸಾಪ್ ಮೂಲಕ ಪ್ರಕರಣ ತುರ್ತು ವಿಚಾರಣೆ ನಡೆಸಿ, ಇತ್ಯರ್ಥಗೊಳಿಸಿದ್ದಾರೆ.
ಏನಿದು ಪ್ರಕರಣ?: ನ್ಯಾಯಮೂರ್ತಿ ಜೆ. ಆರ್ ಸ್ವಾಮಿನಾಥನ್ ಅವರು ನಾಗರ್ಕೋಯಿಲ್ನಲ್ಲಿ ಆಯೋಜನೆಗೊಂಡಿದ್ದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಧರ್ಮಪುರಿ ಜಿಲ್ಲೆಯ ಶ್ರೀ ಅಭೀಷ್ಟ ವರದರಾಜ ಸ್ವಾಮಿ ದೇಗುಲದ ರಥೋತ್ಸವಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಇನ್ಸ್ಪೆಕ್ಟರ್ ರಥೋತ್ಸವ ನಿಲ್ಲಿಸುವಂತೆ ಆದೇಶ ಹೊರಡಿಸಿದ್ದರು. ಹೀಗಾಗಿ, ದೇಗುಲದ ಟ್ರಸ್ಟಿ ಪರ ವಕೀಲರು ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಉತ್ಸವ ನಡೆಯದಿದ್ದರೆ ಗ್ರಾಮಸ್ಥರು ದೇವರ ಕೋಪಕ್ಕೆ ಗುರಿಯಾಗುತ್ತಾರೆಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು.
![High Court hears case through Whatsapp](https://etvbharatimages.akamaized.net/etvbharat/prod-images/mhc_1605newsroom_1652710929_1095.jpg)
ಹೀಗಾಗಿ, ಅಲ್ಲಿಂದಲೇ ವಾಟ್ಸಾಪ್ ಮೂಲಕ ಪ್ರಕರಣ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಸಂಬಂಧಿಸಿದ ರಥೋತ್ಸವ ನಿಲ್ಲಿಸುವಂತೆ ಆದೇಶ ಹೊರಡಿಸಲು ಇನ್ಸ್ಪೆಕ್ಟರ್ಗೆ ಅಧಿಕಾರವಿಲ್ಲ ಎಂದು ತೀರ್ಪು ಪ್ರಕಟಿಸಿದ್ದಾರೆ. ವಾಟ್ಸಪ್ ಮೂಲಕ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲ ಹಾಗೂ ಅಡ್ವೋಕೇಟ್ ಜನರಲ್ ವಾಟ್ಸಪ್ ಮೂಲಕವೇ ವಾದ-ಪ್ರತಿವಾದ ಮಂಡಿಸಿದರು.
ಇದನ್ನೂ ಓದಿ: ಸಾಕಿದ್ದ ಕೋಳಿಗಳಿಗೆ ಕಾಳು, ನೀರು ಹಾಕಲಿಲ್ವಂತೆ.. ಹೆತ್ತ ಮಗಳನ್ನೇ ಹೊಡೆದು ಕೊಂದ ತಂದೆ
ಸರ್ಕಾರದ ಪರ ಅಡ್ವೋಕೆಟ್ ಜನರಲ್ ವಾದ ಮಂಡಿಸಿ, ರಥೋತ್ಸವ ತಡೆಯಬೇಕೆಂಬುದು ಸರ್ಕಾರದ ಉದ್ದೇಶವಲ್ಲ. ಜನರ ಸುರಕ್ಷತೆಯ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ತಂಜಾವೂರಿನಲ್ಲಿ ಉತ್ಸವದ ವೇಳೆ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಶಾಕ್ನಿಂದಾಗಿ 11 ಜನರು ಸಾವನ್ನಪ್ಪಿರುವ ವಿಷಯ ಗಮನಕ್ಕೆ ತಂದರು. ಈ ವೇಳೆ ನ್ಯಾಯಮೂರ್ತಿಗಳು ಮೆರವಣಿಗೆ ವೇಳೆ ವಿದ್ಯುತ್ ಕಡಿತಗೊಳಿಸುವಂತೆ ಸೂಚನೆ ನೀಡಿದರು.