ಹೈದರಾಬಾದ್: ಮುಂದಿನ ಕೆಲವು ದಿನಗಳಲ್ಲಿ ದೇಶದಾದ್ಯಂತ ಕೆಲವು ರಾಜ್ಯಗಳಲ್ಲಿ ಧೂಳಿನ ಬಿರುಗಾಳಿ ಮತ್ತು ಭಾri ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಮುಂದಿನ ಎರಡು ದಿನಗಳ ಕಾಲ ಈಶಾನ್ಯ ಭಾರತದಲ್ಲಿ ಗುಡುಗು, ಮಿಂಚು ಮತ್ತು ಧೂಳಿನ ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ನೈಋತ್ಯ ಮಾನ್ಸೂನ್ ಈ ಬಾರಿ ಮುಂಚಿತವಾಗಿ ಆಗಮಿಸುವ ಸಾಧ್ಯತೆಯಿದೆ. ಈ ಮಧ್ಯೆ ದಕ್ಷಿಣ ಬಂಗಾಳ ಕೊಲ್ಲಿ, ದಕ್ಷಿಣ ಅಂಡಮಾನ್ ಸಮುದ್ರ ಮತ್ತು ನಿಕೋಬಾರ್ ದ್ವೀಪದ ಕೆಲವು ಭಾಗಗಳಿಗೆ ಬಿರುಗಾಳಿ ಸಹಿತ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹೇಳಿದೆ. ಪೂರ್ವ ಉತ್ತರ ಪ್ರದೇಶದ ಮೇಲೆ ಚಂಡಮಾರುತದ ಪರಿಚಲನೆ ಇದೆ. ಈ ಪರಿಚಲನೆಯಿಂದ ಉತ್ತರ ಒಳಭಾಗದ ಕರ್ನಾಟಕದವರೆಗೆ ಕಡಿಮೆ ಉಷ್ಣವಲಯದ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
2ರಿಂದ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ: ಈ ನಡುವೆ, ಮುಂದಿನ ನಾಲ್ಕು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನವು 2ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ನಂತರ 2ರಿಂದ 4 ಡಿಗ್ರಿ ಸೆಲ್ಸಿಯಸ್ ಕುಸಿಯುತ್ತದೆ. ಮುಂದಿನ ಮೂರು ದಿನಗಳಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್ ಕ್ರಮೇಣ ಏರಿಕೆಯಾಗಲಿದೆ. ಮಧ್ಯ ಭಾರತ ಹಾಗೂ ಮಹಾರಾಷ್ಟ್ರದ ಮೇಲೆ ಯಾವುದೇ ಮಹತ್ವದ ಬದಲಾವಣೆ ಇರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.
ಮೇ 20 ರಿಂದ ಜೂ. 13ರವರೆಗೆ ಬಿಸಿ ಗಾಳಿ : ಮುಂದಿನ 48 ಗಂಟೆಗಳಲ್ಲಿ ಪೂರ್ವ ಭಾರತದಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ. ನಂತರ 2ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ. ಮುಂದಿನ ಐದು ದಿನಗಳಲ್ಲಿ ದೇಶದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬರುವುದಿಲ್ಲ. ದಕ್ಷಿಣ ಉತ್ತರ ಪ್ರದೇಶ, ಪಶ್ಚಿಮ ರಾಜಸ್ಥಾನ, ಉತ್ತರ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನಲ್ಲಿ ಮೇ 20ರಿಂದ ಜೂ. 13 ರವರೆಗೆ ಬಿಸಿ ಗಾಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅಧಿಕ ತಾಪಮಾನಕ್ಕೆ ವಿವಿಧೆಡೆ 7 ಮಂದಿ ಸಾವು: ತೆಲಂಗಾಣದಲ್ಲಿ ಜನರು ಬಿಸಿಲಿನ ಧಗೆಗೆ ತತ್ತರಿಸಿ ಹೋಗಿದ್ದಾರೆ. ಮೇ 17ರಂದು ಬಹುತೇಕ ಎಲ್ಲ ಪ್ರದೇಶಗಳಲ್ಲಿ 40ರಿಂದ 46 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಭದ್ರಾದ್ರಿ ಜಿಲ್ಲೆಯ ಜೂಲುರುಪಾಡು 46.4 ಡಿಗ್ರಿ, ಬಯ್ಯಾರಂನಲ್ಲಿ 45.3 ಡಿಗ್ರಿ ಹಾಗೂ ಮಾಮಿಲಗುಡೆಂ (ಸೂರ್ಯಪೇಟೆ) 45.2 ಡಿಗ್ರಿ, ನಿಡಮನೂರಿನಲ್ಲಿ (ನಲ್ಗೊಂಡ) 45.2 ಡಿಗ್ರಿ, ಮಹದೇವಪುರ (ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆ) 44.9 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಅಧಿಕ ಬಿಸಿಲಿನ ಹೊಡೆತಕ್ಕೆ ತೆಲುಗು ರಾಜ್ಯದ ವಿವಿಧೆಡೆ ಏಳು ಜನರು ಮೃತಪಟ್ಟಿದ್ದಾರೆ. ಮಂಗಳವಾರ ರಾಜ್ಯದಲ್ಲಿ ಗರಿಷ್ಠ 45.2 ಡಿಗ್ರಿ ಉಷ್ಣಾಂಶ ಇತ್ತು. ಒಂದೇ ದಿನದಲ್ಲಿ 1.2 ಡಿಗ್ರಿ ಏರಿಕೆಯಾಗಿ ಬುಧವಾರ 46.4 ಡಿಗ್ರಿ ತಲುಪಿತ್ತು. ಗುರುವಾರ ಹಾಗೂ ಶುಕ್ರವಾರ ಹಲವೆಡೆ 43 ಡಿಗ್ರಿ ತಾಪಮಾನ ದಾಖಲಾಗಿತ್ತು. ತಾಪಮಾನ ಏರಿಕೆಯಾಗುತ್ತಿದ್ದು, ಜನರು ಎಚ್ಚರವಹಿಸಬೇಕಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಇದನ್ನೂ ಓದಿ: ರಾಷ್ಟ್ರದಲ್ಲಿ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ ಗಡಿ ದಾಟಿದ ರಕ್ಷಣಾ ಸಾಧನ ಉತ್ಪಾದನೆ ಪ್ರಮಾಣ!