ನವದೆಹಲಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು 'ತೌಕ್ತೆ' ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ. ಮೇ 16 ರ ಹೊತ್ತಿಗೆ ಮಹಾರಾಷ್ಟ್ರ, ಗೋವಾ, ದಕ್ಷಿಣ ಕೊಂಕಣ, ಗುಜರಾತ್ ಹಾಗೂ ಕರ್ನಾಟಕದಲ್ಲೂ ಭಾರಿ ಮಳೆ ಆಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಅರಬ್ಬಿ ಸಮುದ್ರದ ಆಗ್ನೇಯ ಭಾಗ ಮತ್ತು ಲಕ್ಷದ್ವೀಪ ಪ್ರದೇಶದ ಮೇಲೆ ಇಂದು ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಈ ಭಾಗದಲ್ಲಿ ಮುಂದಿನ 24 ತಾಸಿನಲ್ಲಿ ಮತ್ತಷ್ಟು ತೀವ್ರತೆಯ ಚಂಡಮಾರುತ ರೂಪುಗೊಳ್ಳಲಿದೆ ಎಂದು ಇಲಾಖೆ ಹೇಳಿದೆ.
ಶನಿವಾರ ಬೆಳಿಗ್ಗೆ ಅದೇ ಪ್ರದೇಶದಲ್ಲಿ ತನ್ನ ತೀವ್ರತೆಯಲ್ಲಿ ಕೇಂದ್ರೀಕರಿಸಲಿದ್ದು ನಂತರದ 24 ಗಂಟೆಗಳ ಅವಧಿಯಲ್ಲಿ ಚಂಡಮಾರುತ ವೇಗ ಪಡೆಯುತ್ತದೆ. ಪರಿಣಾಮ, ಕರ್ನಾಟಕ ಮತ್ತು ಕೇರಳದ ಕರಾವಳಿ ತೀರ, ಗೋವಾ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪದ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗುವ ನಿರೀಕ್ಷೆಯಿದೆ.
ಚಂಡಮಾರುತ ಅಪ್ಪಳಿಸುವುದಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಕಳುಹಿಸಿಕೊಡಲಾಗಿದೆ. ಈ ನಿಟ್ಟಿನಲ್ಲಿ 29 ರಕ್ಷಣಾ ತಂಡಗಳು ಸಿದ್ಧವಾಗಿವೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಡಿಜಿ, ಎಸ್.ಎನ್. ಪ್ರಧಾನ್ ಹೇಳಿದ್ದಾರೆ.
ಇದು 2021ನೇ ಸಾಲಿನ ಮೊದಲ ಚಂಡಮಾರುತವಾಗಿದ್ದು, ಮ್ಯಾನ್ಮಾರ್ ‘ತೌಕ್ತೆ’ ಎಂದು ನಾಮಕರಣ ಮಾಡಿದೆ. ಮ್ಯಾನ್ಮಾರ್ ಭಾಷೆಯಲ್ಲಿ 'ತೌಕ್ತೆ' ಎಂದರೆ ಹಲ್ಲಿ ಎಂದರ್ಥ.