ನವದೆಹಲಿ: ಆಯುರ್ವೇದ ವೈದ್ಯರಿಗೆ ತರಬೇತಿ ನೀಡಿ, ಅವರು ಶಸ್ತ್ರಚಿಕಿತ್ಸೆ ಮಾಡಲು ಕಾನೂನಾತ್ಮಕವಾಗಿ ಅವಕಾಶ ಮಾಡಿಕೊಡುವ ಅಧಿಸೂಚನೆಯನ್ನು ಇತ್ತೀಚೆಗೆ ಕೇಂದ್ರೀಯ ಭಾರತೀಯ ಔಷಧ ಮಂಡಳಿ (ಸಿಸಿಐಎಂ) ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸುಪ್ರೀಂಕೋರ್ಟ್ ಮೊರೆ ಹೋಗಿದೆ.
"ಸ್ನಾತಕೋತ್ತರ ಆಯುರ್ವೇದ ಶಸ್ತ್ರಚಿಕಿತ್ಸೆಗೆ ನಿಯಮಗಳನ್ನು ತಿದ್ದುಪಡಿ ಮಾಡಲು ಅಥವಾ ರದ್ದುಗೊಳಿಸಲು ಹಾಗೂ ಪಠ್ಯಕ್ರಮದಲ್ಲಿ ಆಧುನಿಕ ಮೆಡಿಸಿನ್ನನ್ನು ಸೇರಿಸಲು ಸಿಸಿಐಎಂಗೆ ಯಾವುದೇ ಅಧಿಕಾರವಿಲ್ಲ ಎಂದು ಘೋಷಿಸಬೇಕೆಂದು ಶನಿವಾರ ಅರ್ಜಿಯನ್ನು ಸಲ್ಲಿಸಲಾಗಿದೆ" ಎಂದು ಐಎಂಎ ಅಧ್ಯಕ್ಷ ಡಾ.ರಾಜನ್ ಶರ್ಮಾ ಹೇಳಿದ್ದಾರೆ.
ಓದಿ: ಅಯೋಧ್ಯೆಯಲ್ಲಿ ರಾಮಾಯಣ ಸಂಶೋಧನಾ ಸಂಸ್ಥೆ ನಿರ್ಮಾಣ: ಮಾಜಿ ಅಧಿಕಾರಿ ಕಿಶೋರ್ ಕುನಾಲ್
ಆಯುರ್ವೇದದ ಪಿಜಿ ವಿದ್ಯಾರ್ಥಿಗಳು ಆರ್ಥೋಪೆಡಿಕ್, ನೇತ್ರವಿಜ್ಞಾನ, ಇಎನ್‌ಟಿ ಮತ್ತು ದಂತ ಸೇರಿದಂತೆ ವಿವಿಧ ರೀತಿಯ ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ವಿಧಾನಗಳನ್ನು ನಡೆಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮತಿ ನೀಡಿತ್ತು.
ಆಯುರ್ವೇದದ ಪಿಜಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆ ನಡೆಸಲು ಅನುವು ಮಾಡಿಕೊಡಲು, ಸಿಸಿಐಎಂ ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ನಿಯಮ 2016 ಕ್ಕೆ ತಿದ್ದುಪಡಿ ಮಾಡಿತ್ತು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಈ ತಿಂಗಳು ದೇಶಾದ್ಯಂತ ಐಎಂಎ ಸದಸ್ಯರ ಪ್ರತಿಭಟನೆಗೆ ಕಾರಣವಾಗಿದೆ.