ಹೈದರಾಬಾದ್: ಮಾನಸಿಕ ಖಿನ್ನತೆ ಹಾಗೂ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಕರು ಇಳಿಮುಖವಾದ್ದರಿಂದ ಮನನೊಂದು ಐಐಟಿ ವಿದ್ಯಾರ್ಥಿಯೋರ್ವ ವಸತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕ್ರಾಂತಿನಗರದಲ್ಲಿ ಗುರುವಾರ ನಡೆದಿದೆ. ಗ್ವಾಲಿಯರ್ ಐಐಟಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ದಿನಾ(24) ಎಂಬಾತನೆ ಪ್ರಾಣ ಕಳೆದುಕೊಂಡ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕನ ತಂದೆ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಡಿಆರ್ಡಿಒದಲ್ಲಿ ವಿಜ್ಞಾನಿಯಾಗಿದ್ದಾರೆ. ದಿನಾ ಸೆಲ್ಫ್ಲೋ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ವಿಡಿಯೋ ಗೇಮ್ ಬಗ್ಗೆ ಮಾಹಿತಿ ಒಳಗೊಂಡ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ. ಆದರೆ ಯುವಕ ಬಾಲ್ಯದಿಂದಲೂ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ವಸತಿ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೂ ಮುನ್ನ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ವಿದ್ಯಾರ್ಥಿ, ಆತ್ಮಹತ್ಯೆ ಹಿಂದಿನ ಕಾರಣಗಳನ್ನು ತಿಳಿಸಿದ್ದಾನೆ. ಅದರಲ್ಲಿ ಸೂಸೈಡ್ ನೋಟ್ ಕೂಡ ಇದ್ದು, ಬಾಲ್ಯದಿಂದಲೂ ತಾನು ಹಲವು ಕಷ್ಟಗಳನ್ನು ಎದುರಿಸಿದ್ದೇನೆ. ನೆಮ್ಮದಿ ಇಲ್ಲದ ಜೀವನ ನಡೆಸಿದ್ದೇನೆ, ತಂದೆ-ತಾಯಿ ತನಗೆ ಸದಾ ಗದರಿಸುತ್ತಿದ್ದರು, ಅವಮಾನಗಳನ್ನು ಸಹಿಸಿಕೊಂಡಿದ್ದೇನೆ. ಎಲ್ಲರೂ ತನ್ನನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದು, ತನಗೆ ಯಾರೂ ನೆರವಾಗಿಲ್ಲ ಎಂದು ಬರೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೆ, ಒಂದನೇ ತರಗತಿಯಲ್ಲಿ ಓದುತ್ತಿರುವಾಗಲೇ ಕಟ್ಟಡ ಹತ್ತಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೆ ಎಂದು ಡೈರಿಯಲ್ಲಿ ಬರೆದುಕೊಂಡಿರುವುದಾಗಿ ದಿನಾ ಸೂಸೈಡ್ ನೋಟ್ನಲ್ಲಿ ತಿಳಿಸಿದ್ದಾನೆ. ಐಐಟಿ ಗ್ವಾಲಿಯರ್‌ನಲ್ಲಿ ನಾಲ್ಕನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಯುವಕ ಕೆಲವು ದಿನಗಳ ಹಿಂದೆ ರಜೆಯ ನಿಮಿತ್ತ ಮನೆಗೆ ಬಂದಿದ್ದ ಎಂದು ಸೈದಾಬಾದ್ ಪೊಲೀಸರು ತಿಳಿಸಿದ್ದಾರೆ.
ದಿನಾ ಯಾವುದೇ ಸ್ನೇಹಿತರೊಂದಿಗೂ ಬೆರೆಯದೆ ಮನೆಯ ಕೊಠಡಿಯಲ್ಲೇ ಉಳಿದುಕೊಂಡಿದ್ದು, ಕನಿಷ್ಠ ಹೊರಗೆ ಕೂಡ ಬಂದಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಡಿಯೋ ಗೇಮ್ ಆಡುವ ಬಗ್ಗೆ ಹೊಸ ವಿಡಿಯೊಗಳನ್ನು ಮಾಡುವುದಲ್ಲಿ ದಿನಾ ಅತ್ಯಂತ ಆಸಕ್ತಿ ಹೊಂದಿದ್ದ. ಅಲ್ಲದೆ, ಯೂಟ್ಯೂಬ್ ಚಾನೆಲ್ ಹೆಚ್ಚಿನ ವೀಕ್ಷಕರನ್ನು ಹೊಂದುವ ನಿರೀಕ್ಷೆ ಹೊಂದಿದ್ದ. ಆದರೆ ಆದು ಸಾಧ್ಯವಾಗದೇ ಇರುವುದೂ ಕೂಡ ಆತ್ಮಹತ್ಯೆಗೆ ಕಾರಣವಾಗಿರುವ ಶಂಕೆ ಇದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಇಂಡೋ-ನೇಪಾಳ ಗಡಿಯಲ್ಲಿ 2 ಕೆಜಿ ಯುರೇನಿಯಂ ವಶಕ್ಕೆ: 15 ಕಳ್ಳಸಾಗಣೆದಾರರ ಬಂಧನ