ಪಾಟ್ನಾ (ಬಿಹಾರ): ಐಪಿಎಸ್ ಅಧಿಕಾರಿಯಾದ ಬಿಹಾರದ ಗೃಹ ರಕ್ಷಕ ಮತ್ತು ಅಗ್ನಿ ಶಾಮಕ ದಳದ ಪೊಲೀಸ್ ಮಹಾನಿರೀಕ್ಷಕ (ಐಜಿ) ವಿಕಾಸ್ ವೈಭವ್ ಅವರ ನಿವಾಸದಲ್ಲೇ ಪರವಾನಗಿ ರಿವಾಲ್ವರ್ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಓರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗುರುವಾರ ಐಜಿ ವಿಕಾಸ್ ವೈಭವ್ ನಿವಾಸದಿಂದ ಅಧಿಕೃತ ರಿವಾಲ್ವರ್ ಕಳ್ಳತನವಾಗಿದ್ದು, 9 ಎಂಎಂ ರಿವಾಲ್ವರ್ ಹಾಗೂ 25 ಜೀವಂತ ಕಾಟ್ರಿಡ್ಜ್ಗಳು ಕಾಣೆಯಾಗಿವೆ ಎಂದು ಹೇಳಲಾಗಿದೆ. ಈ ವಿಚಾರ ಇಡೀ ಬಿಹಾರ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಮೋದಿ ಭಾಷಣದ ವೇಳೆ ಡ್ರೋನ್ ಹಾರಾಟ: ಮೂವರು ಯುವಕರು ವಶಕ್ಕೆ
ಮನೆಯಲ್ಲಿ ಸಾಕಷ್ಟು ಹುಡುಕಾಟ ನಡೆಸಿದರೂ ರಿವಾಲ್ವರ್ ಪತ್ತೆಯಾಗದ ಕಾರಣ, ಪಾಟ್ನಾದ ಗಾರ್ಡ್ನಿಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ, ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ರಿವಾಲ್ವರ್ ಕಳ್ಳತನ ದೃಢಪಡಿಸಿದ ಐಜಿ: ಈ ಬಗ್ಗೆ ಐಜಿ ವಿಕಾಸ್ ವೈಭವ್ ದೂರವಾಣಿಯಲ್ಲಿ ಈಟಿವಿ ಇಂಡಿಯಾಗೆ ಪ್ರತಿಕ್ರಿಯಿಸಿ, ರಿವಾಲ್ವರ್ ಕಳ್ಳತನವಾಗಿರುವ ಬಗ್ಗೆ ದೃಢಪಡಿಸಿದ್ದಾರೆ. ಅಲ್ಲದೇ, ರಿವಾಲ್ವರ್ ಕಳ್ಳತನ ಬಗ್ಗೆ ದಾಖಲಾದ ಎಫ್‌ಐಆರ್ ಪ್ರತಿ ಕೂಡ ಈಟಿವಿ ಇಂಡಿಯಾ ಲಭ್ಯವಾಗಿದೆ. ಸ್ವಚ್ಛತಾ ಕೆಲಸ ಮಾಡುತ್ತಿದ್ದ ಯುವಕನೇ ಈ ರಿವಾಲ್ವರ್ ಕದ್ದಿರುವ ಬಗ್ಗೆ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಎಫ್‌ಐಆರ್ ಪ್ರತಿಯ ಸಾರಾಂಶ: ಸೂರಜ್ ಕುಮಾರ್ ತಂದೆ ಬೀರೇಂದ್ರ ದೋಮ್ ಕೆಲವು ದಿನಗಳಿಂದ ತಮ್ಮ ನಿವಾಸದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದಾರೆ. ನನ್ನ ಮಲಗುವ ಕೋಣೆಯನ್ನು ಸ್ವಚ್ಛಗೊಳಿಸಲು ಪ್ರವೇಶಿಸಿದ ಏಕೈಕ ವ್ಯಕ್ತಿ. ಅನುಮಾನಾಸ್ಪದ ರೀತಿಯಲ್ಲಿ ನನ್ನ ಕೊಠಡಿಯಿಂದ ಹೊರಬರುವುದು ಗೊತ್ತಾಗಿದೆ. ಈ ಬಗ್ಗೆ ಅಂಗರಕ್ಷಕರನ್ನು ವಿಚಾರಿಸಿದಾಗ, ಸೂರಜ್ ಕುಮಾರ್ ಈ ಹಿಂದೆ ಕಡಿಮೆ ಹಣದಲ್ಲಿ ಹೊಸ ಮೊಬೈಲ್ ಖರೀದಿಸಲು ಬಗ್ಗೆ ಮಾತನಾಡುತ್ತಿದ್ದ ಎಂದು ಹೇಳಲಾಗಿದೆ. ಇದರಿಂದಾಗಿ ರಿವಾಲ್ವರ್ ಅನ್ನು ಸೂರಜ್ ಕುಮಾರ್ ಕದ್ದಿರಬೇಕೆಂಬ ಅನುಮಾನವಿದೆ ಎಂದು ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ದೆಹಲಿ ಮದ್ಯ ಹಗರಣ: 10 ಸಾವಿರ ಪುಟಗಳ ಚಾರ್ಜ್ಶೀಟ್, ಡಿಸಿಎಂ ಸಿಸೋಡಿಯಾ ಹೆಸರಿಲ್ಲ
ಕದ್ದ ರಿವಾಲ್ವರ್ ಮಾರಾಟ?: ಅದೇ ವೇಳೆ ಸೂರಜ್‌ಕುಮಾರ್‌ಗೆ ಕರೆ ಮಾಡಿ ವಿಚಾರಿಸಿದಾಗ ರಿವಾಲ್ವರ್ ಆತನೇ ಕದ್ದಿರುವ ಬಗ್ಗೆಯೂ ಒಪ್ಪಿಕೊಂಡಿದ್ದಾನೆ. ಅಲ್ಲದೇ, ರಿವಾಲ್ವರ್ ಅನ್ನು ನನ್ನ ನಿವಾಸದ ಬಳಿ ಉಡಾನ್ ಟೋಲಾದಲ್ಲಿ ವಾಸಿಸುವ ತನ್ನ ಸ್ನೇಹಿತ ಸುಮಿತ್ ಎಂಬುವವರಿಗೆ ಮಾರಾಟ ಮಾಡಲಾದ ಮಾಹಿತಿ ಲಭ್ಯವಾಗಿದೆ ಎಂದೂ ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಐಜಿ ವಿಕಾಸ್ ವೈಭವ್ ಅಧಿಕೃತ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಗೃಹ ರಕ್ಷಕ ದಳದ ಪೇದೆಯೊಬ್ಬರ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ, ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿಗಳು, ತನಿಖೆಗಾಗಿ ವಿಶೇಷ ತಂಡ ರಚಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಮಾಹಿತಿದಾರ ಎಂಬ ಶಂಕೆ; ಗ್ರಾಮಸ್ಥನನ್ನೇ ಕೊಂದ ಮಾವೋವಾದಿಗಳು