ಮುಂಬೈ (ಮಹಾರಾಷ್ಟ್ರ): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾರಾಣಸಿಯಿಂದ ಸ್ಪರ್ಧಿಸಿದರೆ ಖಂಡಿತ ಗೆಲ್ಲುತ್ತಾರೆ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವತ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ಭಾರತದಲ್ಲಿ ರಾಜಕೀಯ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ ಮತ್ತು ಕಾಂಗ್ರೆಸ್ ಈಗೀಗ ಜನರಿಂದ ಭಾರಿ ಬೆಂಬಲ ಪಡೆಯುತ್ತಿದೆ. ವಾರಾಣಸಿಯ ಜನರು ಪ್ರಿಯಾಂಕಾ ಗಾಂಧಿ ಅವರನ್ನು ಬಯಸುತ್ತಾರೆ. ರಾಯ್ ಬರೇಲಿ, ವಾರಾಣಸಿ ಮತ್ತು ಅಮೇಥಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಕಠಿಣವಾಗಿದೆ. ಜನರು ರಾಹುಲ್ ಗಾಂಧಿ ಜೊತೆ ನಿಲ್ಲಬೇಕು. ಒಂದು ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದರೆ ಖಂಡಿತವಾಗಿಯೂ ಆಘಾತಕಾರಿ ಫಲಿತಾಂಶಗಳು ಬರುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಸಂಜಯ್ ರಾವತ್ ಹೇಳಿದರು. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಶಿವಸೇನೆ (ಯುಬಿಟಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ರಾವತ್ ಈ ಹೇಳಿಕೆ ನೀಡಿದ್ದಾರೆ.
ಶರದ್ ಪವಾರ್ ಮತ್ತು ಅಜಿತ್ ಪವಾರ್ ಏಕೆ ಭೇಟಿಯಾಗಬಾರದು?: ಮಹಾರಾಷ್ಟ್ರ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಸಂಜಯ್ ರಾವತ್ "ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಾಧ್ಯವಾದರೆ, ಶರದ್ ಪವಾರ್ ಮತ್ತು ಅಜಿತ್ ಪವಾರ್ ಏಕೆ ಭೇಟಿಯಾಗಬಾರದು"? ಎಂದು ಪ್ರಶ್ನಿಸಿದರು.
ಶರದ್ ಪವಾರ್ ಮತ್ತು ಅಜಿತ್ ಪವಾರ್ ಭೇಟಿಯ ಊಹಾಪೋಹಗಳ ಬಗ್ಗೆ ಮಾತನಾಡಿದ ಸಂಜಯ್ ರಾವತ್, ನಿನ್ನೆ ಶರದ್ ಪವಾರ್ ಮತ್ತು ಅಜಿತ್ ಪವಾರ್ ಭೇಟಿಯಾದ ವಿಚಾರ ಮಾಧ್ಯಮಗಳಿಂದ ನಮಗೆ ತಿಳಿಯಿತು. ಶರದ್ ಪವಾರ್ ಶೀಘ್ರದಲ್ಲೇ ಈ ಬಗ್ಗೆ ಮಾತನಾಡುತ್ತಾರೆ. ಶರದ್ ಪವಾರ್ ಅವರು ಅಜಿತ್ ಪವಾರ್ ಅವರನ್ನು 'ಇಂಡಿಯಾ ಬ್ಲಾಕ್' ಸಭೆಗೆ ಆಹ್ವಾನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಮಹಾರಾಷ್ಟ್ರದ ಇಬ್ಬರೂ ಉಪ ಮುಖ್ಯಮಂತ್ರಿಗಳು ಈ ಪ್ರಸ್ತುತ ಸರ್ಕಾರದ ಬಗ್ಗೆ ಅಸಮಧಾನಗೊಂಡಿದ್ದಾರೆ. 'ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅಜಿತ್ ಪವಾರ್, ದೇವೇಂದ್ರ ಫಡ್ನವಿಸ್ ಮತ್ತು ಮಹಾರಾಷ್ಟ್ರದ ಜನರು ಈ ಪ್ರಸ್ತುತ ಸರ್ಕಾರದಿಂದ ಸಂತೋಷವಾಗಿಲ್ಲ' ಎಂದು ಅವರು ಹೇಳಿದರು.
ಪ್ರಿಯಾಂಕಾ ಗಾಂಧಿ, ಕಮಲ್ನಾಥ್ ವಿರುದ್ಧ ಎಫ್ಐಆರ್: ಕರ್ನಾಟಕದ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆದರೆ, ಮಧ್ಯಪ್ರದೇಶ ಬಿಜೆಪಿ ಸರ್ಕಾರ 50 ಪರ್ಸೆಂಟ್ ಕಮಿಷನ್ ಪಡೆದು ಕೆಲಸ ಮಾಡಿಕೊಡುತ್ತದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ, ಮಾಜಿ ಸಿಎಂ ಕಮಲ್ನಾಥ್ ಹಾಗೂ ಅರುಣ್ ಯಾದವ್ ಸೇರಿದಂತೆ ಇತರರ ವಿರುದ್ಧ ಮಧ್ಯಪ್ರದೇಶ ಸರ್ಕಾರ ಕೇಸ್ ದಾಖಲಿಸಿದೆ. ಈ ಬಗ್ಗೆ ಸೂಕ್ತ ದಾಖಲೆ ನೀಡುವಂತೆಯೂ ಸೂಚಿಸಿದೆ.
ಬಿಜೆಪಿಯ ಕಾನೂನು ಘಟಕದ ಇಂದೋರ್ ಘಟಕದ ಸಂಚಾಲಕ ನಿಮೇಶ್ ಪಾಠಕ್ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ) ಮತ್ತು 469 (ಪ್ರತಿಷ್ಠೆಗೆ ಹಾನಿ) ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸುಳ್ಳು ಆಪಾದನೆ ಮಾಡಿ ಜನರನ್ನು ತಪ್ಪುದಾರಿಗೆಳೆಯುವ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಸಂಚು ರೂಪಿಸಿದ್ದಾರೆ ಎಂದು ಪಾಠಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ರಾಜ್ಯದ ಗುತ್ತಿಗೆದಾರರಿಗೆ ಶೇ.50 ರಷ್ಟು ಕಮಿಷನ್ ನೀಡುವಂತೆ ಕೇಳಲಾಗುತ್ತಿದೆ ಎಂಬ ಆರೋಪದೊಂದಿಗೆ ಜ್ಞಾನೇಂದ್ರ ಅವಸ್ತಿ ಎಂಬ ವ್ಯಕ್ತಿಯ ಹೆಸರನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ದೂರು ಆಧರಿಸಿ ಇಂದೋರ್‌ನ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಮತ್ತು 469 ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿಯ ಸೆಕ್ಷನ್ 469, 500, ಮತ್ತು 501 ಅಡಿ ಇದೇ ರೀತಿಯ ಪ್ರಕರಣವನ್ನು ಭೋಪಾಲ್‌ನಲ್ಲಿಯೂ ಪಕ್ಷದ ಸ್ಥಳೀಯ ನಾಯಕರ ದೂರಿನ ಮೇರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ ಸರ್ಕಾರದ ಮೇಲೆ 50% ಕಮಿಷನ್ ಆರೋಪ: ಪ್ರಿಯಾಂಕಾ ಗಾಂಧಿ, ಕಮಲ್ನಾಥ್ ವಿರುದ್ಧ ಎಫ್ಐಆರ್