ಹೈದರಾಬಾದ್: ತೆಲಂಗಾಣದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೇ, ಹಳೆ ಹೈದರಾಬಾದ್ ಸಿಟಿಯಲ್ಲಿರುವ ರೋಹಿಂಗ್ಯಾಸ್ ಮತ್ತು ಪಾಕಿಸ್ತಾನಿಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ಬಿಜೆಪಿ ಮುಖಂಡರೊಬ್ಬರು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸಾಸುದ್ದೀನ್ ಓವೈಸಿ ಅವರು ಈ ಸಿಟಿಯಲ್ಲಿ ಪಾಕಿಸ್ತಾನಿಗಳು ಇದ್ದರೇ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕಾರಣ ಎಂದಿದ್ದಾರೆ.
"ಹಳೆ ಹೈದರಾಬಾದ್ ನಗರಕ್ಕೆ ಪಾಕಿಸ್ತಾನಿಗಳು ಬರುವವರೆಗೂ ಮೋದಿ ಮತ್ತು ಅಮಿತ್ ಶಾ ಮಲಗಿದ್ದರೇ, ಒಂದು ವೇಳೆ ಅವರು ಬಂದಿದ್ದರೆ ಇದಕ್ಕೆ ಇವರಿಬ್ಬರೇ ಕಾರಣ. ನಾನಂತೂ ಅವರನ್ನು ಎಲ್ಲೂ ನೋಡಿಲ್ಲ. ಬಿಜೆಪಿ ಬರೀ ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಅವರು ಬರುವವರೆಗೂ ಇವರು ಏನು ಮಾಡುತ್ತಿದ್ದರು. ನಿಜವಾಗ್ಲೂ ರೋಹಿಂಗ್ಯಾಸ್ ಮತ್ತು ಪಾಕಿಸ್ತಾನಿಗಳು ಇಲ್ಲಿ ಇದ್ದಾರೆಯೇ "ಎಂದು ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಭಾರತೀಯರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವುದು ಸರಿಯೇ: ಅಸಾದುದ್ದೀನ್ ಓವೈಸಿ
"ಬಿಹಾರದ 2019ರ ಸಂಸತ್ ಚುನಾವಣೆಯ ಸಮಯದಲ್ಲಿ ಬಿಜೆಪಿ 222 ಸ್ಥಾನಗಳಲ್ಲಿ ಜಯಗಳಿಸಿತ್ತು. ಈಗ ಒಂದೂವರೆ ವರ್ಷದ ನಂತರ ಅವರು ವಿಧಾನಸಭಾ ಚುನಾವಣೆಯಲ್ಲಿ 75 ಸ್ಥಾನಗಳಿಗೆ ಇಳಿದಿದ್ದಾರೆ. ನೀವು ನರೇಂದ್ರ ಮೋದಿಯವರನ್ನು ಹಳೆಯ ನಗರಕ್ಕೆ ಕರೆತಂದು ಪ್ರಚಾರ ಮಾಡಿಸಿ ಏನಾಗುತ್ತದೆ ಎಂದು ನಾವು ನೋಡುತ್ತೇವೆ. ಅವರ ಸಭೆಯನ್ನು ನೀವು ಇಲ್ಲಿ ಆಯೋಜಿಸಿ, ನೀವು ಇಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತೀರಿ ಎಂದು ನಾವು ನೋಡುತ್ತೇವೆ "ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಈ ನಗರದ ಹೆಸರನ್ನು ಹಾಳು ಮಾಡಲು ಬಿಜೆಪಿ ಮುಂದಾಗಿದೆ ಎಂದು ಹೈದರಾಬಾದ್‌ನ ಲೋಕಸಭಾ ಸಂಸದ ಆರೋಪಿಸಿದ್ದಾರೆ.